 ಮೋಹನ್ದಾಸ್ ಕರಮ್ಚಂದ್ ಗಾಂಧೀ 
1869-1948. ಭಾರತದ ಸ್ವಾತಂತ್ರ್ಯ ಶಿಲ್ಪಿ. ಅಹಿಂಸಾತ್ಮಕ ಕ್ರಾಂತಿಯಿಂದ ಬ್ರಿಟಿಷರ ಚಕ್ರಾಧಿಪತ್ಯವನ್ನು ಭಾರತದಲ್ಲಿ ಕೊನೆಗೊಳಿಸಿದ ಕಾರಣಪುರುಷ. ತನ್ನ ಇಡೀ ಬಾಳನ್ನು ಸತ್ಯಶೋಧನೆಗಾಗಿ ಮುಡಿಪಿಟ್ಟ ಮಹಾತ್ಮ. ಹಲವಾರು ಶತಮಾನಗಳಿಂದ ನಿಸ್ಸತ್ತ್ವಯುತವೂ ನಿರ್ವೀರ್ಯವೂ ವಿವಕ್ತವೂ ಆಗಿ ಪರಿಣಮಿಸಿದ್ದ ಭಾರತೀಯ ಸಮಾಜವನ್ನು ಕ್ರಾಂತಿಕಾರಿ ಪರಿವರ್ತನೆಗಳಿಗೆ ಒಳಪಡಿಸಿದ ದ್ರಷ್ಟಾರ. ಜನನ 1869ರ ಅಕ್ಟೋಬರ್ 2ರಂದು. ಕಾಠಿಯಾವಾಡದ ಪೋರ್ಬಂದರಿನಲ್ಲಿ. ತಂದೆ ಕರಮ್ಚಂದ್ ಗಾಂಧೀ ರಾಜಕೋಟೆಯಲ್ಲೂ ವಾಂಕನೀರಿನಲ್ಲೂ ದಿವಾನರಾಗಿದ್ದರು. ಗಾಂಧಿಯವರ ತಾಯಿ ಪುತಲಿಬಾಯಿ. ತಂದೆ ಸ್ವಾಮಿಭಕ್ತ, ಸತ್ಯನಿಷ್ಠ, ಧೈರ್ಯಶಾಲಿ, ಉದಾರಿ. ತಾಯಿಯ ಧರ್ಮಶ್ರದ್ಧೆ ಅನುಪಮವಾದ್ದು. ಗಾಂಧಿಯವರು ಆಕೆಯಿಂದ ಬಹಳಮಟ್ಟಿಗೆ ಪ್ರಭಾವಿತರಾಗಿದ್ದರು.
ಗಾಂಧಿಯವರ ವಿದ್ಯಾಭ್ಯಾಸ ಪೋರ್ಬಂದರ್ ಮತ್ತು ರಾಜಕೋಟೆಗಳಲ್ಲಿ ನಡೆಯಿತು. ಶಾಲೆಯಲ್ಲಿ ಅವರು ಸಾಮಾನ್ಯ ವಿದ್ಯಾರ್ಥಿಯಾಗಿದ್ದರು. ಅವರು ಎಂದಿಗೂ ಕಾಲ ತಪ್ಪಿ ನಡೆಯುತ್ತಿರಲಿಲ್ಲ. ಹಿರಿಯರಲ್ಲಿ ವಿಧೇಯತೆ, ಎಲ್ಲ ಬಾಲಕರಂತೆ ಅವರೂ ಕೆಟ್ಟ ಸಹವಾಸ ಸೇರಿ, ಹೊಗೆ ಸೇದಿದರು, ಕಳ್ಳತನವನ್ನೂ ಮಾಡಿದರು, ಮಾಂಸ ಕೂಡ ತಿಂದರು. ಆದರೆ ಇವು ಮಾಡಬಾರದ ಕೃತ್ಯಗಳೆಂದು ಬಹಳ ಬೇಗ ಅರಿತು ಕೊಂಡರು. ಪಶ್ಚಾತ್ತಾಪಪಟ್ಟು, ಇವನ್ನು ತ್ಯಜಿಸಿದರು. 
ಗಾಂಧಿಯವರು ಪ್ರೌಢಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದಾಗ, ಹದಿಮೂರನೆಯ ವಯಸ್ಸಿನಲ್ಲಿ, ಕಸ್ತೂರ ಬಾರೊಂದಿಗೆ ಅವರ ವಿವಾಹವಾಯಿತು. ಕಸ್ತೂರ ಬಾ ಅವರಿಗೂ ಗಾಂಧಿಯವರಿಗಾಗಿದಷ್ಟೇ ವಯಸ್ಸಾಗಿತ್ತು. ಉತ್ತರೋತ್ತರದಲ್ಲಿ ಅವರಿಗೆ ನಾಲ್ವರು ಗಂಡುಮಕ್ಕಳಾದರು.ಮೋಹನ್ದಾಸ್ ಕರಮ್ಚಂದ್ ಗಾಂಧೀ                                                             
ಗಾಂಧಿಯವರ ಎಳಮನಸ್ಸಿನ ಮೇಲೆ ಅದ್ಭುತ ಪರಿಣಾಮ ಮಾಡಿದ ನಾಟಕ ಹರಿಶ್ಚಂದ್ರ. ತಾವೂ ಸತ್ಯಸಂಧರಾಗಬೇಕೆಂಬುದು ಅವರು ಮನಸ್ಸು ಮಾಡಿದರು. ರಂಭಾ ಎಂಬ ದಾದಿ ಅವರಿಗೆ ರಾಮನಾಮ ಕಲಿಸಿದ್ದಳು. ಸತ್ಯ, ರಾಮನಾಮ, ಇವೆರಡೂ ಗಾಂಧೀ ಜೀವನದ ಪರಮ ಆದರ್ಶಗಳಾಗಿದ್ದುವು.
ಗಾಂಧಿಯವರು 18ನೆಯ ವಯಸ್ಸಿನಲ್ಲಿ ರಾಜಕೋಟೆಯ ಆಲ್ಫ್ರೆಡ್ ಪ್ರೌಢಶಾಲೆ ಯಿಂದ ಮೆಟ್ರಿಕ್ಯುಲೇಷನ್ ಪರೀಕ್ಷೆ ಮುಗಿಸಿದರು. ಅನಂತರ ಅವರು ಕಾಲೇಜು ಸೇರಿದರಾದರೂ ಅವರ ವಿದ್ಯಾಭ್ಯಾಸ ಚೆನ್ನಾಗಿ ಆಗಲಿಲ್ಲ. ಆಗ ಹಿತೈಷಿಗಳೊಬ್ಬರ ಸಲಹೆಯಂತೆ ಅವರು ಇಂಗ್ಲೆಂಡಿಗೆ ಹೋಗಿ ನ್ಯಾಯಶಾಸ್ತ್ರ ವ್ಯಾಸಂಗ ಮಾಡಿಬರಬೇಕೆಂದು ನಿರ್ಧಾರವಾಯಿತು. ವಿದೇಶದಲ್ಲಿರುವಾಗ ಮಧ್ಯಪಾನ, ಪರಸ್ತ್ರೀಸಂಗ, ಮಾಂಸಾಹಾರ ಸೇವನೆ ಮಾಡುವುದಿಲ್ಲವೆಂದು ತಾಯಿಗೆ ವಚನವಿತ್ತು, 1888ರ ಸೆಪ್ಟೆಂಬರ್ 4ರಂದು ಗಾಂಧಿಯವರು ಇಂಗ್ಲೆಂಡಿಗೆ ಪ್ರಯಾಣ ಮಾಡಿದರು. ಮೋಧ್ ಬನಿಯ ಜಾತಿಯಲ್ಲಿ ಮೊಟ್ಟಮೊದಲು ಸಮುದ್ರಯಾನ ಮಾಡಿದವರು ಅವರೇ. ಇದು ಜಾತಿಪದ್ಧತಿಗೆ ನಿಷಿದ್ಧವೆಂದು ಮುಖಂಡರು ಅವರಿಗೆ ಬಹಿಷ್ಕಾರ ಹಾಕಿದರು. ಆಗ ಗಾಂಧಿಯವರಿಗೆ 19 ವರ್ಷ. ಕಸ್ತೂರ ಬಾ ಆ ವೇಳೆಗೆ ಒಂದು ಗಂಡು ಮಗುವಿನ ತಾಯಿಯಾಗಿದ್ದರು.
ಗಾಂಧಿಯವರು ಲಂಡನಿನಲ್ಲಿ ಮೂರು ವರ್ಷಗಳ ಕಾಲ ಇದ್ದರು. ಅಪ್ಪಟ ಆಂಗ್ಲ ಗೃಹಸ್ಥನಂತೆ ಆಗಬೇಕೆಂಬುದು ಆರಂಭದಲ್ಲಿ ಇವರ ಪ್ರಯತ್ನವಾಗಿತ್ತು. ನೃತ್ಯ, ಫ್ರೆಂಚ್, ಉಪನ್ಯಾಸ ಕಲೆ ಇವನ್ನು ಅಭ್ಯಸಿಸಬೇಕೆಂದು ಪ್ರಯತ್ನಿಸಿ, ಅವು ತಮಗೆ ಸಾಧ್ಯವಿಲ್ಲವೆಂದು ಕೈಬಿಟ್ಟರು. ಕರ್ತವ್ಯದ ಕಡೆ ಚೆನ್ನಾಗಿ ಗಮನವಿಟ್ಟು ವ್ಯಾಸಂಗ ಮಾಡಿದರು.

ಗಾಂಧಿಯವರು ತಮ್ಮ ತಾಯಿಗೆ ಕೊಟ್ಟಿದ್ದ ವಚನಗಳನ್ನು ಈಡೇರಿಸಲು ಬಹಳ ಶ್ರಮಪಟ್ಟರು. ಮಾಂಸಾಹಾರ ಸೇವಿಸದೆ ಲಂಡನಿನಲ್ಲಿ ಇರುವುದಾದರೂ ಹೇಗೆ ಎಂದು ಸಂಶಯ ಪಡುತ್ತಿದ್ದ ಅವರು ಒಂದು ನಿದರ್ಶನವಾದರು. ಮೊದಮೊದಲು ಶಾಖಾಹಾರದ ಭೋಜನಗೃಹಗಳಲ್ಲಿ ಊಟಮಾಡುತ್ತಿದ್ದರು. ಕೊನೆಗೆ ತಾವೇ ಅಡಿಗೆ ಮಾಡಿಕೊಳ್ಳಲಾರಂಭಿಸಿ ಸಸ್ಯಾಹಾರಕ್ಕೆ ಸಂಬಂಧಿಸಿದಂತೆ ಹಲವಾರು ಪ್ರಯೋಗಗಳನ್ನು ಮಾಡಿದರು. ರುಚಿಯ ಅಧಿಷ್ಠಾನ ಮನಸ್ಸೇ ಹೊರತು ನಾಲಗೆಯಲ್ಲವೆಂಬುದು ಅವರ ಅರಿವಿಗೆ ಬಂತು. ಅಸ್ವಾದ ಅವರ ಜೀವನದ ಒಂದು ನಿಯಮವಾಯಿತು. ನೀತಿ ತಪ್ಪುವಂಥ ಪ್ರಸಂಗವೂ ಒಮ್ಮೆ ಗಾಂಧಿಯವರಿಗೆ ಬರುವುದರಲ್ಲಿತ್ತು. ಲಂಡನಿನಲ್ಲಿದ್ದಾಗಲೇ ಗಾಂಧಿಯವರು ಭಗವದ್ಗೀತೆಯನ್ನು ಮೊದಲನೆಯ ಬಾರಿಗೆ ಓದಿದ್ದು. ಆ ಮಹಾಗ್ರಂಥ ಅವರ ಮನಸ್ಸಿನ ಮೇಲೆ ಅಚ್ಚಳಿಯದ ಪರಿಣಾಮ ಬೀರಿತು. ಅವರ ಬೈಬಲಿನ ಹೊಸ ಒಡಂಬಡಿಕೆಯನ್ನು ಓದಿದ್ದೂ ಅದೇ ಕಾಲದಲ್ಲಿ. ಕೆಡುಕಿಗೆ ಕೆಡುಕನ್ನು ಮಾಡಬೇಡ-ಎಂಬ ಸೂಕ್ತ ಅವರಿಗೆ ಬಹಳ ಹಿಡಿಸಿತು. ಅವರು ಚಿಕ್ಕವರಿದ್ದಾಗ ಓದಿದ್ದ, ಗುಜರಾತೀ ಕವಿ ಶಾಮಲಾಲ್ ಭಟ್ಟನ, ಒಂದು ಸೀಸಪದ್ಯದ ಉದಾತ್ತ ಭಾವಗಳನ್ನು ಅದು ಸಮರ್ಥಿಸಿತು.
ಗಾಂಧಿಯವರು ಇಂಗ್ಲೆಂಡಿನಲ್ಲಿ ವ್ಯಾಸಂಗ ಮುಗಿಸಿ ಬ್ಯಾರಿಸ್ಟರ್ ಪದವಿ ಪಡೆದು 1891ರ ಜೂನ್ 12ರಂದು ಭಾರತಕ್ಕೆ ಹಿಂದಿರುಗಿ ಎರಡು ವರ್ಷಕಾಲ ಮುಂಬಯಿ ರಾಜಕೋಟೆಗಳಲ್ಲಿ ವಕೀಲ ವೃತ್ತಿ ಮಾಡಿದರು. ಆದರೆ ಅವರಿಗೆ ಯಶಸ್ಸು ದೊರಕಲಿಲ್ಲ. ಅವರಲ್ಲಿ ಆತ್ಮವಿಶ್ವಾಸ, ವಾದಚಾತುರ್ಯ ಇರಲಿಲ್ಲ. ದಕ್ಷಿಣ ಆಫ್ರಿಕದಲ್ಲಿದ್ದ ಮುಸ್ಲಿಂ ವರ್ತಕರೊಬ್ಬರಿಂದ ಅವರಿಗೆ ಅನಿರೀಕ್ಷಿತವಾಗಿ ಬೇಡಿಕೆಯೊಂದು ಬಂತು. ತಮ್ಮ ಐರೋಪ್ಯ ವಕೀಲರಿಗೆ ಸಹಾಯಕರಾಗಬೇಕೆಂದು ಆ ವರ್ತಕರು ಬಯಸಿದರು. ಇದು ಗಾಂಧಿಯವರ ಬಾಳಿನ ಒಂದು ಮುಖ್ಯ ತಿರುವಾಗಿ ಪರಿಣಮಿಸಿತು. 1893ರ ಮೇ ತಿಂಗಳಿನಲ್ಲಿ ಡರ್ಬನಿನಲ್ಲಿ ಬಂದು ಇಳಿದ ಒಂದು ವಾರದ ಮೇಲೆ ಗಾಂಧಿಯವರು ಅಲ್ಲಿಯ ನ್ಯಾಯಾಲಯಕ್ಕೆ ಹೋದಾಗ ಅವರು ತಲೆಗೆ ಸುತ್ತಿದ್ದ ಪೇಟವನ್ನು ತೆಗೆಯಬೇಕೆಂದು ನ್ಯಾಯಾಧೀಶ ಆಜ್ಞೆ ಮಾಡಿದ. ಅಲ್ಲಿಯ ಬಿಳಿಯರು ಭಾರತೀಯರನ್ನು ಕಾಣುತ್ತಿದ್ದ ರೀತಿ ಎಂಥದೆಂಬುದು ಗಾಂಧಿಯವರಿಗೆ ಪ್ರಥಮವಾಗಿ ಅರಿವಿಗೆ ಬಂತು. ಇದಕ್ಕಿಂತ ಅತ್ಯಂತ ತೀವ್ರತರವಾದ ಆಘಾತವೊಂದು ಅವರಿಗೆ ಕಾದಿತ್ತು. ಅವರು ಡರ್ಬನಿನಿಂದ ಪ್ರಿಟೋರಿಯಕ್ಕೆ ರೈಲ್ವೆಯ ಮೂಲಕ ಒಂದನೆಯ ತರಗತಿಯ ಡಬ್ಬಿಯಲ್ಲಿ ಪ್ರಯಾಣ ಮಾಡುತ್ತಿದ್ದಾಗ ಈ ಘಟನೆ ಸಂಭವಿಸಿತು. ಮಾರಿಟ್ಸ್ಬರ್ಗ್ನಲ್ಲಿ ಬಿಳಿಯನೊಬ್ಬ ಆ ಡಬ್ಬಿಯನ್ನು ಹೊಕ್ಕ. ಗಾಂಧಿಯವರ ಬಳಿ ಒಂದನೆಯ ತರಗತಿಯ ಟಿಕೆಟ್ ಇದ್ದರೂ ಆತ ಗಾಂಧಿಯವರನ್ನು ಹೊರತಳ್ಳಿಸಿದ. ವರ್ಣೀಯರು ಒಂದನೆಯ ತರಗತಿಯಲ್ಲಿ ಬಿಳಿಯರೊಂದಿಗೆ ಪ್ರಯಾಣಮಾಡುವುದಕ್ಕೆ ನಿಷೇಧವಿತ್ತು. ಕತ್ತಲು ತುಂಬಿದ ವಿಶ್ರಾಂತಿಮಂದಿರದಲ್ಲಿ ಗಾಂಧಿಯವರು ಚಳಿಯಿಂದ ನಡುಗುತ್ತ ರಾತ್ರಿ ಕಳೆಯಬೇಕಾಯಿತು. ನನ್ನ ಗಂಟುಮೂಟೆ ಎಲ್ಲಿತ್ತೆಂಬುದು ನನಗೆ ಗೊತ್ತಿರಲಿಲ್ಲ. ಅದು ಎಲ್ಲಿದೆಯೆಂದು ಯಾರನ್ನಾದರೂ ಕೇಳುವ ಧೈರ್ಯವೂ ನನಗಿರಲಿಲ್ಲ. ಹಾಗೆ ಮಾಡಿದರೆ ಮತ್ತೆ ಅವಮಾನ ಹಲ್ಲೆಗಳಿಗೆ ಗುರಿಯಾಗಬೇಕಾಗುತ್ತಿತ್ತು. ನಿದ್ದೆ ಮಾಡುವ ಪ್ರಶ್ನೆಯೇ ಇರಲಿಲ್ಲ. ನನ್ನ ಮನಸ್ಸು ಸಂಶಯದ ಪ್ರಭುತ್ವಕ್ಕೆ ಒಳಗಾಯಿತು. ಭಾರತಕ್ಕೆ ಓಡಿಹೋಗುವುದು ಹೇಡಿತನವೆಂದು ಸರಿರಾತ್ರಿಯಲ್ಲಿ ತೀರ್ಮಾನಕ್ಕೆ ಬಂದೆ-ಎಂದು ಅವರು ಬರೆದುಕೊಂಡಿದ್ದಾರೆ. ನನ್ನ ಕರ್ತವ್ಯವೇನೆಂದು ನನ್ನನ್ನು ನಾನೇ ಕೇಳಿಕೊಂಡೆ. ನಾನು ಭಾರತಕ್ಕೆ ಮರಳಬೇಕೆ? ಅಥವಾ, ದೇವರ ನೆರವಿಗಿರುವನೆಂದು ನಂಬಿ, ಮುಂದುವರಿದು, ಅನುಭವಿಸಬೇಕಾದ್ದನ್ನೆಲ್ಲ ಅನುಭವಿಸಲೆ? ಎಂದು ಅವರು ತಮ್ಮನ್ನು ತಾವೇ ಪ್ರಶ್ನಿಸಿಕೊಂಡರು. ಅಲ್ಲೇ ಉಳಿದು ಕಷ್ಟ ಅನುಭವಿಸಬೇಕೆಂದು ತೀರ್ಮಾನಿಸಿದೆ. ನನ್ನ ಕ್ರಿಯಾತ್ಮಕ ಅಹಿಂಸೆ ಆರಂಭವಾದ್ದು ಅಂದಿನಿಂದ.

ದಕ್ಷಿಣ ಆಫ್ರಿಕದಲ್ಲಿ ಭಾರತೀಯ ನಾಗರಿಕರ ಹಕ್ಕುಗಳ ರಕ್ಷಣೆಗಾಗಿ ಹೋರಾಟ ನಡೆಸಬೇಕೆಂದು ನಿರ್ಧರಿಸಿದ ಗಾಂಧಿಯವರು ಈ ಉದ್ದೇಶಕ್ಕಾಗಿ 1894ರಲ್ಲಿ ನಟಾಲ್ ಇಂಡಿಯನ್ ಕಾಂಗ್ರೆಸ್ ಎಂಬ ಪಕ್ಷ ಸ್ಥಾಪಿಸಿದರು. ಬ್ರಿಟಿಷ್ ಚಕ್ರಾಧಿಪತ್ಯದ ಒಳ್ಳೆಯ ತನದಲ್ಲಿ ಅವರಿಗೆ ಆಗ ನಂಬಿಕೆಯಿತ್ತು. ದಕ್ಷಿಣ ಆಫ್ರಿಕ ಯುದ್ಧದಲ್ಲೂ (1899-1902) ಹಾಗು ದಂಗೆಯಲ್ಲೂ ಅವರು ಗಾಯಗೊಂಡವರಿಗೆ ಚಿಕಿತ್ಸೆ ನೀಡಲು ಸ್ವಯಂ ಸೇವಕ ದಳವೊಂದನ್ನು ನಿರ್ಮಿಸಿ ಬ್ರಿಟಿಷ್ ಚಕ್ರಾಧಿಪತ್ಯಕ್ಕೆ ಮನಃಪುರ್ವಕವಾಗಿ ನೆರವು ನೀಡಿದರು. ಇದಕ್ಕೆ ಬ್ರಿಟಿಷ್ ಸರ್ಕಾರದ ಮೆಚ್ಚುಗೆ ಲಭಿಸಿತಾದರೂ ಭಾರತೀಯರ ಬಗ್ಗೆ ಅದರ ಧೋರಣೆ ಬದಲಾಗಲಿಲ್ಲ. ಪ್ರತಿಯಾಗಿ ಇನ್ನೂ ಕ್ರೂರವಾಯಿತು. ಈ ವೇಳೆಗೆ ಗಾಂಧಿಯವರು ವಕೀಲಿಯಲ್ಲಿ ವಿಶೇಷವಾದ ಕೀರ್ತಿಯನ್ನೂ ಯಶಸ್ಸನ್ನೂ ಗಳಿಸಿದ್ದರು. ಜೀವನದ ಬಗ್ಗೆ, ತಾವು ನಿರ್ವಹಿಸಬೇಕಾದ ಕರ್ತವ್ಯದ ಬಗ್ಗೆ ಅವರ ಮನಸ್ಸು ಹೆಚ್ಚು ಹೆಚ್ಚು ಖಚಿತಗೊಂಡಿತು. ಈ ನಡುವೆ ಅವರು ಭಾರತಕ್ಕೂ ಹೋಗಿ ಬರುತ್ತಿದ್ದರು. ಗೋಪಾಲಕೃಷ್ಣ ಗೋಖಲೆಯವರ ಪರಿಚಯವಾಗಿ ಅದು ಗಾಢ ಸ್ನೇಹವಾಗಿ ಪರಿಣಮಿಸಿತು. ಗೋಖಲೆಯವರನ್ನು ಗಾಂಧಿಯವರು ತಮ್ಮ ರಾಜಕೀಯ ಗುರುವೆಂದೇ ಭಾವಿಸಿದರು. ಭಾರತೀಯ ನೆಲಸುಗಾರರ ಹಕ್ಕುಗಳಿಗಾಗಿ ಹೋರಾಟ ನಡೆಸಲು ಇಂಡಿಯನ್ ಒಪಿನಿಯನ್ ಎಂಬ ಪತ್ರಿಕೆಯೊಂದು 1904ರಲ್ಲಿ ಪ್ರಾರಂಭವಾಯಿತು.

ಪ್ರತಿಯೊಬ್ಬ ಭಾರತೀಯನೂ ತನ್ನ ಬೆರಳ ಗುರುತುಗಳನ್ನು ನೋಂದಾಯಿಸ ಬೇಕೆಂದು ವಿಧಿಸುವ ಮಸೂದೆಯೊಂದಕ್ಕೆ ಟ್ರಾನ್ಸ್ವಾಲ್ ಸರ್ಕಾರ 1906ರಲ್ಲಿ ಅನುಮೋದನೆ ನೀಡಿದಾಗ ಹೋರಾಟ ಬಿರುಸಾಯಿತು. ಸ್ತ್ರೀಪುರಷರೆಂಬ ಭೇದವಿಲ್ಲದೆ ಪ್ರತಿಯೊಬ್ಬರಿಗೂ ಅನ್ವಯಿಸುತ್ತಿದ್ದ ಈ ಕಾನೂನಿನಂತೆ ನಡೆಯದವರು ದಂಡ ಕಾರಾಗೃಹವಾಸಗಳ ಶಿಕ್ಷೆಗೆ ಒಳಗಾಗಬೇಕಾಗುತ್ತಿತ್ತು. ಅಪಮಾನಕವಾದ ಈ ಕಾನೂನಿಗೆ ವಿಧೇಯತೆ ತೋರಿಸಬಾರದೆಂದು ಗಾಂಧಿಯವರು ಭಾರತೀಯರಿಗೆ ಹೇಳಿದರು. ಅವರ ನಾಯಕತ್ವದಲ್ಲಿ 2,000 ಸ್ತ್ರೀಯರು ಪ್ರತಿಭಟನೆಯ ಮೆರವಣಿಗೆ ನಡೆಸಿದರು. ಜೈಲಿಗೂ ನಡೆದರು.
ಗಾಂಧಿಯವರು ಆರಂಭಿಸಿದ ಸತ್ಯಾಗ್ರಹದಲ್ಲಿ ಅನೇಕ ಭಾರತೀಯ ವರ್ತಕರೂ ವಕೀಲರೂ ಸಾಮಾನ್ಯರೂ ಭಾಗವಹಿಸಿ ಕಾರಾಗೃಹವಾಸ ಅನುಭವಿಸಿದರು. ಗಡೀಪಾರು, ಆರ್ಥಿಕ ಒತ್ತಾಯ ಮುಂತಾದ ಯಾವುದಕ್ಕೂ ಸತ್ಯಾಗ್ರಹಿಗಳು ಜಗ್ಗಲಿಲ್ಲ. ಗಾಂಧಿಯವರ ನಾಯಕತ್ವದಲ್ಲಿ ಅವರ ನಂಬಿಕೆ ಅಷ್ಟು ಅಗಾಧವಾಗಿತ್ತು. 1912ರಲ್ಲಿ ಗೋಪಾಲಕೃಷ್ಣ ಗೋಖಲೆಯವರ ದಕ್ಷಿಣ ಆಫ್ರಿಕಕ್ಕೆ ಭೇಟಿಯಿತ್ತುದರ ಪರಿಣಾಮವಾಗಿ ವರ್ಣಭೇದನೀತಿ ನಿಲ್ಲುವುದೆಂದೂ ಭಾರತೀಯರು ತೆರಬೇಕಾಗಿದ್ದ ತೆರಿಗೆ ರದ್ದಾಗುವುದೆಂದೂ ಆಶೆ ಜನಿಸಿತು. ಆದರೆ ಅದು ಭಗ್ನವಾಯಿತು. ಕ್ರೈಸ್ತ ವಿವಾಹಪದ್ಧತಿಗನುಗುಣವಾಗಿ ವಿವಾಹ ದಾಖಲಾತಿ ಹೊಂದದ ಎಲ್ಲ ಹಿಂದೂ, ಮುಸ್ಲಿಂ ಮತ್ತು ಪಾರ್ಸೀ ವಿವಾಹಗಳೂ ನ್ಯಾಯಬದ್ಧವಲ್ಲವೆಂಬುದು ಶ್ರೇಷ್ಠ ನ್ಯಾಯಾಲಯವಿತ್ತ ಒಂದು ತೀರ್ಪಿನ ಫಲ. ಇದು ಭಾರತೀಯರ ಆತ್ಮಗೌರವವನ್ನು ಪುರ್ಣವಾಗಿ ನಾಶಮಾಡಿತು. ಸತ್ಯಾಗ್ರಹ ಚಳವಳಿಗೆ ಇದರಿಂದ ಪುಟವಿಟ್ಟಂತಾಯಿತು.
ಈ ಸತ್ಯಾಗ್ರಹ ಹೋರಾಟದಲ್ಲಿ ಪುರುಷರ ಜೊತೆಗೆ ಸ್ತ್ರೀಯರೂ ಭಾಗವಹಿಸಿದರು. ಶಾಸನವನ್ನು ಉಲ್ಲಂಘಿಸಿ ನಟಾಲಿನಿಂದ ಟ್ರಾನ್ಸ್ಸ್ವಾಲಿಗೆ ಪ್ರವೇಶಿಸುವುದೇ ಆಗಿನ ಸತ್ಯಾಗ್ರಹದ ಕ್ರಮ. 1913ರ ನವೆಂಬರ್ 6ರಂದು ನಡೆದ ಶಾಸನೋಲ್ಲಂಘನ ಯಾತ್ರೆಯಲ್ಲಿ ಅಸಂಖ್ಯ ಹೆಂಗಸರೂ ಗಂಡಸರೂ ಮಕ್ಕಳೂ ಭಾಗವಹಿಸಿದರು. ದಕ್ಷಿಣ ಆಫ್ರಿಕ ಸರ್ಕಾರ ಸತ್ಯಾಗ್ರಹಿಗಳ ಮೇಲೆ ನಡೆಸಿದ ಅತ್ಯಾಚಾರ ಬಹಳ ಹೇಯವಾದ್ದು. ಕೊನೆಗೆ ಗಾಂಧೀ ಮತ್ತು ಜನರಲ್ ಸ್ಮಟ್ಸರ ನಡುವೆ ಮಾತುಕತೆ ನಡೆದು ಒಂದು ಒಪ್ಪಂದವಾಯಿತು. 8 ವರ್ಷಗಳ ಸತ್ಯಾಗ್ರಹ ಕೊನೆಗೊಂಡಿತು. ಭಾರತೀಯರ ಬೇಡಿಕೆಗಳು ಸ್ವೀಕೃತವಾದುವು. ತೆರಿಗೆ ರದ್ದಾಯಿತು. ಭಾರತೀಯ ಸಂಪ್ರದಾಯದ ಪ್ರಕಾರ ನಡೆದ ವಿವಾಹಗಳು ಶಾಸನಬದ್ಧವೆಂದು ಘೋಷಿತವಾದುವು. ಇದರಿಂದ ದಕ್ಷಿಣ ಆಫ್ರಿಕದ ಭಾರತೀಯರ ಎಲ್ಲ ಸಮಸ್ಯೆಗಳಿಗೂ ಪರಿಹಾರ ದೊರಕದಿದ್ದರೂ ಭಾರತೀಯರು ಆತ್ಮಗೌರವಕ್ಕಾಗಿ ಹೋರಾಡುವ ಶಕ್ತಿಯನ್ನು ಕಂಡುಕೊಂಡರು. ಅಲ್ಲದೆ ಈ ಹೋರಾಟದ ನಾಯಕತ್ವ ವಹಿಸಿದ್ದ ಗಾಂಧಿಯವರು ಅಪಾರ ಅನುಭವ ಪಡೆದಿದ್ದರು. ಸಾಮಾಜಿಕ, ರಾಜಕೀಯ ಚಳವಳಿಗಳನ್ನು ನಡೆಸಲು ಹೊಸದೊಂದು ತಂತ್ರವೇ ಅವರಿಂದ ಸೃಷ್ಟಿಯಾಗಿತ್ತು.
ಗಾಂಧಿಯವರು ಹೂಡಿದ ಈ ಹೋರಾಟವನ್ನು ಮೊದಲು ನಿಶ್ಯಸ್ತ್ರ ಪ್ರತಿಭಟನೆ ಎಂದೇ ಕರೆಯಲಾಗುತ್ತಿತ್ತು. ಅನಂತರ ಅವರು ಇದನ್ನು ಸದಾಗ್ರಹವೆಂದೂ ಕೊನೆಗೆ ಸತ್ಯಾಗ್ರಹ ಎಂದೂ ಕರೆದರು. 1906ರಿಂದ 1914ರ ವರೆಗೆ ದಕ್ಷಿಣ ಆಫ್ರಿಕದಲ್ಲಿ ಸತ್ಯಾಗ್ರಹ ಚಳವಳಿ ನಡೆಯಿತು.

ತಮ್ಮ ವಕೀಲಿಯಿಂದ ಚೆನ್ನಾಗಿ ಸಂಪಾದನೆ ಮಾಡುತ್ತಿದ್ದ ಗಾಂಧಿಯವರು ಕ್ರಮೇಣ ಅದನ್ನೂ ಬಿಟ್ಟುಕೊಟ್ಟರು. ತಮ್ಮ ವೇಳೆಯನ್ನೆಲ್ಲ ಅವರು ಮುಂದಿರಿಸಿಕೊಂಡ ಉದ್ದೇಶಕ್ಕಾಗಿಯೇ ಮೀಸಲಾಗಿರಿಸಿದರು. ಜೀವನದ ಬಗ್ಗೆ ಅವರ ಧೋರಣೆ ಶೀಘ್ರವಾಗಿ ಬದಲಾಗುತ್ತಿತ್ತು. ಗೀತೆ ಉಪನಿಷತ್ತು ಕುರಾನ್ ಬೈಬಲ್ಗಳನ್ನು ಅವರು ಆಳವಾಗಿ ಅಭ್ಯಾಸ ಮಾಡಿದರು. ಗೀತೆಯಂತೂ ಅವರಿಗೆ ಬಾಯಿಪಾಠವಾಗಿತ್ತು. ಅದು ಅವರ ಜೀವನಧರ್ಮಸೂತ್ರ. ಅವರ ಮೇಲೆ ತುಂಬ ಪರಿಣಾಮ ಮಾಡಿದ ಇನ್ನೊಂದು ಪುಸ್ತಕವೆಂದರೆ ರಸ್ಕಿನನ ಅಂಟು ದಿಸ್ ಲಾಸ್ಸ್ಟ. ಎಲ್ಲರ ಒಳಿತಾದಾಗಲೇ ವ್ಯಕ್ತಿಯ ಒಳಿತು; ದುಡಿಮೆಯ ಬಾಳೇ ಸಾರ್ಥಕವಾದ್ದು-ಎಂಬುದು ಅವರು ಗ್ರಹಿಸಿದ ತತ್ತ್ವ. ಬ್ರಹ್ಮಚರ್ಯವನ್ನು ಅವರು ಅನುಷ್ಠಾನಕ್ಕೆ ತಂದರು. ತಮ್ಮ ಸಂಸಾರದೊಂದಿಗೂ ಸ್ನೇಹಿತರೊಂದಿಗೂ ಅವರು ಫೀನಿಕ್ಸ್ ಆಶ್ರಮವನ್ನೂ 1910ರಲ್ಲಿ ಟಾಲ್ಸ್ಟಾಯ್ ಆಶ್ರಮವನ್ನೂ ಸ್ಥಾಪಿಸಿದರು. ದೇಹ ಮನಸ್ಸುಗಳೆರಡರ ಸಾಮರಸ್ಯ ಸಾಧಿಸಿದರು. ಗುಡಿಸುವುದು, ಮಚ್ಚೆ ಹೊಲಿಯುವುದು, ಕೃಷಿ, ಮುದ್ರಣ-ಹೀಗೆ ಎಲ್ಲ ಬಗೆಯ ಕೆಲಸಗಳನ್ನೂ ಮಾಡಿದರು. ಯಾವ ಕೆಲಸವೂ ತುಚ್ಚವಲ್ಲ, ಯಾವುದೂ ದೊಡ್ಡದಲ್ಲ-ಎಂಬುದು ಅವರು ಸ್ವತಃ ಕಲಿತ, ಕಲಿಸಿದ ಪಾಠ. ಅವರೊಬ್ಬ ವಸ್ತುನಿಷ್ಠ ಆದರ್ಶವಾದಿ.

ಗಾಂಧಿಯವರು ದಕ್ಷಿಣ ಆಫ್ರಿಕದಲ್ಲಿದ್ದ 21 ವರ್ಷಗಳ ಕಾಲ ಅದು ಅವರಿಗೊಂದು ಪ್ರಯೋಗ ಶಾಲೆ ಆಯಿತು. ಅವರ ವ್ಯಕ್ತಿತ್ವ ವಿಕಾಸ ಹೊಂದಿದ್ದಲ್ಲದೆ, ಅವರ ಜೀವನತತ್ತ್ವದ ವಿಕಾಸವೂ ಆಯಿತು. ನೈತಿಕ ಪ್ರಶ್ನೆಗಳ ಬಗ್ಗೆ ಜಿಜ್ಞಾಸೆ ಅವರ ಬಾಲ್ಯದಿಂದಲೇ ಮುಂದುವರಿದಿದ್ದರೂ ಅದನ್ನು ಆಗ ವ್ಯವಸ್ಥಿತ ರೂಪದಲ್ಲಿ ನಡೆಸಿದರು. ಗೀತಾಧ್ಯಯನದಿಂದ ಅವರು ಅಸಂಗ್ರಹದ-ಐಚ್ಛಿಕ ದಾರಿದ್ರ್ಯದ-ಆದರ್ಶವನ್ನು ರೂಢಿಸಿಕೊಂಡರು. ನಿಷ್ಕಾಮಸೇವೆ, ಬ್ರಹ್ಮಚರ್ಯ ಇವು ಅವರ ಸಾರ್ವಜನಿಕ ಜೀವನಕ್ಕೆ ಶಕ್ತಿಯನ್ನು ನೀಡಿದವು. ಟಾಲ್ಸ್ಟಾಯ್   ಗ್ರಂಥಗಳ ಅಧ್ಯಯನ ಅವರ ಅಭಿಪ್ರಾಯಗಳನ್ನು ಮತ್ತಷ್ಟು ದೃಢಪಡಿಸಿತು. ಅವರು ಕಾಯಕದ ಪ್ರಭಾವವನ್ನು ಅರಿತರು. ಜಾನ್ ರಸ್ಕಿನ್ನನ ಅಂಟು ದಿಸ್ ಲಾಸ್ಸ್ಟ ಗ್ರಂಥವಂತೂ ಅವರ ಜೀವನಪರಿವರ್ತನೆಗೆ ಪ್ರಧಾನ ಕಾರಣವಾಯಿತು. ಟಾಲ್ಸ್ಟಾಯಿ ಯೊಂದಿಗೆ ಅವರು ಪತ್ರವ್ಯವಹಾರ ಬೆಳೆಸಿದರು. ಸತ್ಯಾಗ್ರಹ ವಿಶ್ವವ್ಯಾಪಕವಾಗುವಷ್ಟು ಪ್ರಾಮುಖ್ಯವುಳ್ಳ ಒಂದು ಪರಿಕಲ್ಪನೆ ಎಂದು ಟಾಲ್ಸ್ಟಾಯ್ ಹೊಗಳಿದ. ಗಾಂಧಿಯವರು ಒಂದು ನೂತನ ಜೀವನದರ್ಶನವನ್ನೇ ಕಂಡುಕೊಂಡು ಅದಕ್ಕೆ ತಮ್ಮ ಬಾಳನ್ನು ಮುಡುಪಾಗಿ ಇಟ್ಟರು. ಅದನ್ನು ಸರ್ವೋದಯ-ಸರ್ವರ ಕ್ಷೇಮ-ಎಂದು ಕರೆದರು. ಗಾಂಧಿಯವರು ದಕ್ಷಿಣ ಆಫ್ರಿಕದಲ್ಲಿದ್ದಾಗ ತಮ್ಮ ಮನಸ್ಸಿನಲ್ಲಿ ರೂಪುಗೊಂಡ ಭಾವನೆಗಳನ್ನೆಲ್ಲ ಅಭಿವ್ಯಕ್ತಿಸಿ ಬರೆದ ಪುಸ್ತಕ ಹಿಂದ್ ಸ್ವರಾಜ್ ಅಥವಾ ಇಂಡಿಯನ್ ಹೋಂ ರೂಲ್ (1909). ಇದು ಗಾಂಧೀ ಚಿಂತನದ ಸಾರದಂತಿದೆ. ಸಾಮಾನ್ಯ ವ್ಯಕ್ತಿಯ ಹಕ್ಕುಗಳಿಗೆ ಮಾನ್ಯತೆ ಇರುವ, ಅವನ್ನು ಅವನು ರಕ್ಷಿಸಿಕೊಳ್ಳಲು ಅವಕಾಶವಿರುವ, ಶೋಷಣರಹಿತವಾದ ಸಮಾಜವೇ ತಮ್ಮ ಗುರಿಯೆಂದು ಅವರು ಇದರಲ್ಲಿ ಪ್ರತಿಪಾದಿಸಿದ್ದಾರೆ. ಯಂತ್ರ ನಾಗರಿಕತೆಯನ್ನು ಅವರು ಇಲ್ಲಿ ಖಂಡಿಸಿರುವ ರೀತಿ ಅನುಪಮವಾದ್ದು. ಟಾಲ್ಸ್ಟಾಯಿಗೆ ಈ ಪುಸ್ತಕ ತುಂಬ ಪ್ರಿಯವಾಯಿತು.

ಗಾಂಧಿಯವರು 1915ರ ಜನವರಿಯಲ್ಲಿ ಭಾರತಕ್ಕೆ ಬಂದರು. ರವೀಂದ್ರನಾಥ ಠಾಕೂರರು ಅವರನ್ನು ಮಹಾತ್ಮ ಎಂದು ಕರೆದರು. ಗೋಪಾಲಕೃಷ್ಣ ಗೋಖಲೆಯವರ ಸಲಹೆಯಂತೆ ಗಾಂಧಿಯವರು ಒಂದು ವರ್ಷ ಕಾಲ ಯಾವ ಸಾರ್ವಜನಿಕ ಕಾರ್ಯದಲ್ಲೂ ತೊಡಗಲಿಲ್ಲ. ಭಾರತದ ಪರಿಸ್ಥಿತಿಯ ಅಧ್ಯಯನವನ್ನು ಆರಂಭಿಸಿದರು. 1915ರ ಮೇ ತಿಂಗಳಲ್ಲಿ ಅಹಮದಾಬಾದಿನ ಬಳಿ ಸತ್ಯಾಗ್ರಹ ಆಶ್ರಮ ಆರಂಭವಾಯಿತು. ಆಶ್ರಮವಾಸಿಗಳು ಖಾದಿ ಧರಿಸಬೇಕಾಗಿತ್ತು; ಸತ್ಯ ಅಹಿಂಸೆ ಬ್ರಹ್ಮಚರ್ಯಗಳನ್ನು ಪಾಲಿಸುತ್ತ, ಅಸ್ಪೃಶ್ಯತಾ ನಿವಾರಣೆ, ಮಾತೃಭಾಷೆಯ ಮೂಲಕ ಶಿಕ್ಷಣ ಮುಂತಾದ ಕಾರ್ಯಗಳಲ್ಲಿ ಪ್ರವೃತ್ತರಾಗುವುದಾಗಿ ಅವರು ವ್ರತ ತೊಟ್ಟಿದ್ದರು.
ಗಾಂಧಿಯವರು ಎರಡು ವರ್ಷಗಳ ಕಾಲ ಭಾರತದಲ್ಲಿ ಸಂಚಾರ ಮಾಡಿದರು. ಒಂದನೆಯ ಮಹಾಯುದ್ಧ ಅಂತಿಮಘಟ್ಟ ಮುಟ್ಟಿದ್ದ ಆ ಕಾಲದಲ್ಲಿ ಬಿಹಾರದ ಚಂಪಾರಣ್ನ ರೈತರ ಕರುಣಾಜನಕ ಸ್ಥಿತಿ ಗಾಂಧಿಯವರ ಗಮನ ಸೆಳೆಯಿತು. ಅಲ್ಲಿಯ ರೈತರು ದೀರ್ಘಕಾಲದಿಂದ ಐರೋಪ್ಯ ಮತ್ತು ಭಾರತೀಯ ಭೂಮಾಲೀಕರ ಶೋಷಣೆಗೆ ಒಳಗಾಗಿದ್ದರು. ಗಾಂಧಿಯವರು ರಾಜೇಂದ್ರ ಪ್ರಸಾದರೊಂದಿಗೆ ಅಲ್ಲಿಯ ರೈತರ ಸ್ಥಿತಿಯನ್ನು ಕುರಿತ ವಿಚಾರಣೆಯಲ್ಲಿ ತೊಡಗಿದರು. ಬ್ರಿಟಿಷ್ ಸರ್ಕಾರ ಇದನ್ನು ಸಹಿಸಲಿಲ್ಲ. ಗಾಂಧಿಯವರು ಆ ಜಿಲ್ಲೆಯಿಂದ ಹೊರಗೆ ಹೋಗಬೇಕೆಂಬ ಆಜ್ಞೆ ಜಾರಿಯಾಯಿತು. ಗಾಂಧಿಯವರು ಅದನ್ನು ಉಲ್ಲಂಘಿಸಿದರು. ಭಾರತದಲ್ಲಿ ಮೊಟ್ಟ ಮೊದಲನೆಯ ಸತ್ಯಾಗ್ರಹವಿದು. ನ್ಯಾಯಾಲಯದಲ್ಲಿ ಅವರ ವಿಚಾರಣೆಯಾಯಿತು. ತಾವು ಆಜ್ಞೋಲ್ಲಂಘನೆ ಮಾಡಿದ್ದುಂಟೆಂದು ಗಾಂಧಿಯವರು ಒಪ್ಪಿಕೊಂಡರು. ಗವರ್ನರ್ ನಡುವೆ ಪ್ರವೇಶಿಸಿ, ವಿಚಾರಣಾ ಸಮಿತಿಯೊಂದನ್ನು ನೇಮಕ ಮಾಡಿದರು. ಗಾಂಧಿಯವರೂ ಸದಸ್ಯರಾಗಿದ್ದ ಆ ಸಮಿತಿಯ ಶಿಫಾರಸುಗಳ ಮೇರೆಗೆ ಚಂಪಾರಣ್ ರೈತರ ಸುಧಾರಣೆಗಾಗಿ ಕಾಯಿದೆ ಜಾರಿಗೆ ಬಂತು. ಅನಂತರ ಗಾಂಧಿಯವರ ಗಮನ ಅಹಮದಾಬಾದಿನ ಗಿರಿಣಿ ಕಾರ್ಮಿಕರತ್ತ ಹರಿಯಿತು. ಅವರಿಗೆ ನ್ಯಾಯವಾದ ವೇತನ ದೊರಕಬೇಕೆಂದು ಅವರು ಇಪ್ಪತ್ತೊಂದು ದಿನಗಳ ಮುಷ್ಕರವನ್ನು ಸಂಘಟಿಸಿದರು. ಅದೂ ಫಲಪ್ರದವಾಯಿತು.

ಬ್ರಿಟಿಷ್ ನ್ಯಾಯದಲ್ಲಿ ವಿಶೇಷ ನಂಬಿಕೆ ಇಟ್ಟಿದ್ದ ಮಹಾತ್ಮ ಗಾಂಧಿಯವರು ವೈಸ್ರಾಯ್ ಲಾರ್ಡ್ ಚೆಮ್ಸ್ಫರ್ಡನ ಅಪೇಕ್ಷೆಯಂತೆ ಒಂದನೆಯ ಮಹಾಯುದ್ಧದಲ್ಲಿ ಬ್ರಿಟನಿಗೆ ತಮ್ಮ ಬೆಂಬಲ ನೀಡಿದರು. ಆದರೆ ಅವರ ಈ ನಂಬಿಕೆ ಅಲುಗುವಂಥ ಘಟನೆಯೊಂದು ಅಷ್ಟರಲ್ಲಿ ಸಂಭವಿಸಿತು. ಜನರ ರಾಜಕೀಯ ಆಶೋತ್ತರಗಳನ್ನು ಸರ್ಕಾರ ಈಡೇರಿಸುವ ಬದಲು ಅವನ್ನು ಹತ್ತಿಕ್ಕುವ ಕ್ರಮ ಕೈಗೊಂಡಿತು. ಬ್ರಿಟಿಷ್ ಸರ್ಕಾರಕ್ಕೆ ವಿರುದ್ಧವಾದ ಕಲಾಪಗಳಲ್ಲಿ ತೊಡಗಿರುವರೆಂಬ ಸಂಶಯಕ್ಕೆ ಒಳಗಾದವರನ್ನು ವಿಚಾರಣೆಯಿಲ್ಲದೆ ಬಂಧನದಲ್ಲಿಡಲು ಸರ್ಕಾರಕ್ಕೆ ಅಧಿಕಾರ ನೀಡುವ ರೌಲತ್ ಕಾಯಿದೆ ಜಾರಿಗೆ ಬಂದಿತು. ಗಾಂಧಿಯವರು ಇದನ್ನು ಪ್ರತಿಭಟಿಸಿದರು. ಏಪ್ರಿಲ್ 6ರಂದು ಹರತಾಳವನ್ನಾಚರಿಸಬೇಕೆಂದು ಕರೆ ಇತ್ತರು. ಅವರು ದೆಹಲಿಗೆ ಹೋಗುತ್ತಿದ್ದಾಗ ಹಾದಿಯಲ್ಲಿ ದಸ್ತಗಿರಿಯಾದರು. ಇದರಿಂದ ಮುಳಿದ ಜನ ಹಿಂಸಾಚರಣೆ ಮಾಡಿದರು. ಗಾಂಧಿಯವರು ಸತ್ಯಾಗ್ರಹವನ್ನು ನಿಲ್ಲಿಸಬೇಕಾಯಿತು. ಅದೇ ಸಮಯದಲ್ಲಿ ಇನ್ನೊಂದು ಮಹಾ ದುರ್ಘಟನೆ ನಡೆಯಿತು. ಅಮೃತಸರದ ಜಲಿಯನ್ವಾಲಾಬಾಗಿನಲ್ಲಿ ಸೇರಿದ್ದ ನಿಶ್ಯಸ್ತ್ರಜನರ ಮೇಲೆ ಸರ್ಕಾರ ಮಷೀನ್-ಗನ್ ಪ್ರಯೋಗಿಸಿತು. ಪಂಜಾಬಿನಲ್ಲಿ ಲಷ್ಕರಿ ಕಾನೂನು ಜಾರಿಗೆ ಬಂತು. ಇದರಿಂದ ಇಡೀ ಭಾರತದಲ್ಲಿ ಬ್ರಿಟಿಷ್ ಸರ್ಕಾರದ ವಿರುದ್ಧ ಕ್ರೋಧ ಹಬ್ಬಿತು.
ಈ ಸಮಯದಲ್ಲಿ ಮಹಾತ್ಮ ಗಾಂಧಿಯವರು ಜನರಿಗೆ ಅಹಿಂಸೆಯನ್ನೂ ನಿರ್ಭಯವನ್ನೂ ಬೋಧಿಸಿದರು. ಇದಕ್ಕಾಗಿಯೇ ಇಂಗ್ಲಿಷಿನಲ್ಲಿ ಯಂಗ್ ಇಂಡಿಯ ಎಂಬ ಪತ್ರಿಕೆಯೂ ಗುಜರಾತಿಯಲ್ಲಿ ನವಜೀವನ ಎಂಬ ಪತ್ರಿಕೆಯೂ ಆರಂಭವಾದುವು. (1919). ಯಂಗ್ ಇಂಡಿಯ ಪತ್ರಿಕೆಯಲ್ಲಿ ಇವರ ಕೊನೆಯ ಮಗ ದೇವದಾಸ್ ಗಾಂಧೀ ಕೆಲಸ ಮಾಡುತ್ತಿದ್ದರು. 

1920ರಲ್ಲಿ ಆರಂಭವಾದ ಒಂದು ಮುಖ್ಯ ಚಳವಳಿ ಖಿಲಾಫತ್. ತುರ್ಕಿಯ ಖಲೀಪನ ಅಧಿಕಾರಕ್ಕೆ ಚ್ಯುತಿ ಬಾರದಂತೆ ಬ್ರಿಟನಿಗೆ ಒತ್ತಾಯ ಹಾಕಲು ಭಾರತೀಯ ಮುಸ್ಲಿಮರು ಆರಂಭಿಸಿದ್ದ ಚಳವಳಿಯಿದು. ಮುಸ್ಲಿಮರ ಮನಸ್ಸನ್ನು ಕಲಕಿದ್ದ ಈ ಚಳವಳಿಯಲ್ಲಿ ಹಿಂದುಗಳು ಸಹಾನುಭೂತಿಯಿಂದ ಪಾಲ್ಗೊಳ್ಳಬೇಕೆಂಬುದು ಗಾಂಧಿಯವರ ಅಭಿಮತವಾಗಿತ್ತು. ಹಿಂದೂ ಮುಸ್ಲಿಂ ಐಕ್ಯ ಸಾಧನೆ ಇದರ ಉದ್ದೇಶ. ಬ್ರಿಟಿಷ್ ಸಾಮ್ರಾಜ್ಯಾಧಿಕಾರದ ಸಂಕೇತವಾದ ಎಲ್ಲ ಬಿರುದುಗಳನ್ನೂ ಗೌರವಗಳನ್ನೂ ಭಾರತೀಯರು ಹಿಂದಕ್ಕೊಪ್ಪಿಸಬೇಕು. ಶಾಲೆ ಕಾಲೇಜು ನ್ಯಾಯಾಲಯ ವಿಧಾನಸಭೆಗಳನ್ನು ಬಹಿಷ್ಕರಿಸಬೇಕು-ಎಂದು ಗಾಂಧಿಯವರು ಕರೆ ಕೊಟ್ಟರು. ತಮಗೆ ಬ್ರಿಟಿಷ್ ಸತ್ತೆಯಿಂದ ದತ್ತವಾಗಿದ್ದ ಪದಕವೇ ಮುಂತಾದವನ್ನೆಲ್ಲ ಅವರು ಹಿಂದುರುಗಿಸಿದರು. ಸತ್ಯಾಗ್ರಹ ಆರಂಭವಾಯಿತು. ಭಾರತದ ಜನರನ್ನು ಅವರು ಅಹಿಂಸಾತ್ಮಕ ಹೋರಾಟದ ಪಥದಲ್ಲಿ ಕೊಂಡೊಯ್ಯಲು ಸತತವಾಗಿ ಯತ್ನಿಸಿದರು. ಚರಖಾ ಅವರ ಸ್ವರಾಜ್ಯದ ಪ್ರತೀಕ ವಾಯಿತು. ಚರಖಾ ಅನಾರ್ಥಿಕವೆನ್ನಬಹುದು. ಆದರೆ ಇದು ಅತ್ಯಂತ ಅಗ್ಗ. ನಿರುದ್ಯೋಗಿಗಳಿಗೆ ಇದರಿಂದ ಇಷ್ಟಷ್ಟಾದರೂ ಉದ್ಯೋಗ ದೊರಕುತ್ತದೆ. ಭಾರತವನ್ನು ಲ್ಯಾಂಕಷೈರಿನ ಯಂತ್ರದ ಹಿಡಿತದಿಂದ ಬಿಡಿಸಲು ಇದೊಂದೇ ಮಾರ್ಗ. ಬೇರೆಲ್ಲ ವಿದೇಶೀ ವಸ್ತುಗಳನ್ನು ಬಹಿಷ್ಕರಿಸಿದರೂ ವಸ್ತ್ರಕ್ಕಾಗಿ ಅನ್ಯರನ್ನು ಅವಲಂಬಿಸಬೇಕಾದ ಪರಿಸ್ಥಿತಿಯನ್ನು ತಪ್ಪಿಸಲಿಕ್ಕಾಗಿ ಇದು ಅಗತ್ಯ-ಎಂಬುದು ಗಾಂಧಿಯವರ ವಾದ. ಅಸಂಖ್ಯಾತ ಜನರಿಗೆ ತಮ್ಮ ಹರಿದ ಬಟ್ಟೆಯ ಬದಲು ಖಾದಿ ಕೊಳ್ಳಲು ಸಾಧ್ಯವಿಲ್ಲದ ಪರಿಸ್ಥಿತಿ ಇದ್ದದ್ದನ್ನು ಕಂಡು ಅವರ ಮನಸ್ಸು ಬಲು ನೊಂದಿತು. ಅಂಥವರಿಗೆ ಒಂದು ತುಂಡು ದಟ್ಟಿಯಿದ್ದರೂ ಸಾಕಿತ್ತು. ಹಾಗಿರುವಾಗ ತಾವಾದರೂ ಹೇಗೆ ಮೈ ತುಂಬ ಬಟ್ಟೆ ತೊಟ್ಟುಕೊಂಡಾರು? 1921ರಲ್ಲಿ ಗಾಂಧಿಯವರೂ ತುಂಡುಲುಂಗೀ ಧಾರಿಯಾದರು. ಅಸಹಕಾರ ಚಳವಳಿಯನ್ನು ಬಲಪಡಿಸಿದರು. ಅಸಹಕಾರ ಧಾರ್ಮಿಕ ಹಾಗೂ ನೈತಿಕ ಚಳವಳಿಯಾದರೂ ಸರ್ಕಾರವನ್ನು ಉರುಳಿಸುವುದೇ ಅದರ ಧ್ಯೇಯ-ಎಂದು ಸಾರಿದರು. ಬ್ರಿಟಿಷ್ ಚಕ್ರಾಧಿಪತ್ಯವನ್ನು ಸೈತಾನನ ಪ್ರಭುತ್ವವೆಂದು ಕರೆದರು.
1922ರಲ್ಲಿ ಗಾಂಧಿಯವರು ಗುಜರಾತಿನ ಬಾರ್ಡೋಲಿ ಜಿಲ್ಲೆಯಲ್ಲಿ ಸಾಮೂಹಿಕ ಕರನಿರಾಕರಣೆಯ ಚಳವಳಿಯ ನಾಯಕತ್ವ ವಹಿಸಲು ನಿರ್ಧರಿಸಿದರು. ಆದರೆ ಆ ಸಮಯಕ್ಕೆ ಸರಿಯಾಗಿ ಉತ್ತರ ಪ್ರದೇಶದ ಚೌರಿಚೌರಾದಲ್ಲಿ ಜನರು ಹಿಂಸಾಕಾರ್ಯದಲ್ಲಿ ತೊಡಗಿದರು. ಪೋಲೀಸರ ಮೇಲೆ ಹಲ್ಲೆ ಮಾಡಿದರು. ಜನರಿನ್ನೂ ಅಹಿಂಸಾತ್ಮಕ ಚಳವಳಿಗೆ ಸಿದ್ಧರಾಗಿಲ್ಲವೆಂದು ಗಾಂಧಿಯವರಿಗೆ ಮನವರಿಕೆಯಾಗಿ ಸಾಮೂಹಿಕ ಚಳವಳಿಯನ್ನು ನಿಲ್ಲಿಸಿದರು. ಗಾಂಧಿಯವರ ಈ ನಿರ್ಣಯವನ್ನು ಅನೇಕರು ಒಪ್ಪಲಿಲ್ಲ. ಗಾಂಧಿಯವರು ಪ್ರಾಯಶ್ಚಿತ್ತರೂಪವಾಗಿ ಐದು ದಿನಗಳ ಉಪವಾಸ ಕೈಗೊಂಡರು. 1922ರ ಮಾರ್ಚ್ 13ರಂದು ಸರ್ಕಾರ ಅವರನ್ನು ಬಂಧಿಸಿತು. ಗಾಂಧಿಯವರು ಯಂಗ್ ಇಂಡಿಯ ಪತ್ರಿಕೆಯಲ್ಲಿ ಬರೆದಿದ್ದ ಲೇಖನಗಳು ರಾಜದ್ರೋಹಾತ್ಮಕವೆಂದು ಅದು ಅಪಾದಿಸಿತು. ನ್ಯಾಯಾಲಯ ಅವರಿಗೆ ಆರು ವರ್ಷಗಳ ಕಾರಾಗೃಹ ಶಿಕ್ಷೆ ವಿಧಿಸಿತು. ಪುಣೆಯ ಕಾರಾಗೃಹದಲ್ಲಿ ಎರಡು ವರ್ಷ ಕಳೆದ ಮೇಲೆ ಗಾಂಧಿಯವರಿಗೆ ಅಂತ್ರಪುಚ್ಛ ವ್ಯಾಧಿಗಾಗಿ ಶಸ್ತ್ರಚಿಕಿತ್ಸೆ ನಡೆಯಬೇಕಾಗಿದ್ದುದರಿಂದ ಅವರು ಬಿಡುಗಡೆ ಹೊಂದಿದರು.

ಆ ವೇಳೆಗೆ ಖಿಲಾಫತ್ ಚಳವಳಿ ವಿಫಲವಾಗಿತ್ತು. ವಿಧಾನ ಮಂಡಲಗಳನ್ನು ಪ್ರವೇಶಿಸಿ ಅಲ್ಲಿಂದ ಸರ್ಕಾರವನ್ನು ವಿರೋಧಿಸಬೇಕೆಂಬವರು ಸ್ವರಾಜ್ಯ ಪಕ್ಷವನ್ನು ಸ್ಥಾಪಿಸಿದ್ದರು. ವಿಧಾನಮಂಡಲ ಪ್ರವೇಶ ಮಾಡಬೇಕೆಂಬುದು ಕಾಂಗ್ರೆಸಿನ ಬಹುಮತಾಭಿ ಪ್ರಾಯವಾಗಿತ್ತು. ಗಾಂಧಿಯವರು ರಾಜಕೀಯದಿಂದ ದೂರವಾದರು. ಖಾದಿ ಪ್ರಚಾರಕ್ಕೆ ಅವರು ಹೆಚ್ಚು ಗಮನ ನೀಡಿದರು. 1924ರಲ್ಲಿ ಬೆಳಗಾಂವಿಯಲ್ಲಿ ನಡೆದ ಕಾಂಗ್ರೆಸ್ ಅಧಿವೇಶನಕ್ಕೆ ಗಾಂಧಿಯವರು ಅಧ್ಯಕ್ಷರಾಗಿದ್ದರು.
1927ರಲ್ಲಿ-ಇರ್ವಿನ್ ವೈಸ್ರಾಯ್ ಆಗಿದ್ದಾಗ-ಭಾರತದ ರಾಜ್ಯಾಂಗ ಸುಧಾರಣೆ ಗಳಿಗಾಗಿ ಸರ್ ಜಾನ್ ಸೈಮನ್ ಅಧ್ಯಕ್ಷತೆಯಲ್ಲಿ ಸರ್ಕಾರ ಒಂದು ಆಯೋಗವನ್ನು ನೇಮಿಸಿತು. ಒಬ್ಬನಾದರೂ ಭಾರತೀಯ ಸದಸ್ಯನಿಲ್ಲದ ಆ ಆಯೋಗವನ್ನು ಭಾರತೀಯರು ವಿರೋಧಿಸಿದರು. ಕಾಂಗ್ರೆಸ್ ಬಹಿಷ್ಕಾರ ಹಾಕಿತು. ಭಾರತದ ರಾಜಕೀಯ ಭವಿಷ್ಯವನ್ನು ನಿರ್ಧರಿಸಲು ಬ್ರಿಟಿಷ್ ಮತ್ತು ಭಾರತೀಯ ಪ್ರತಿನಿಧಿಗಳನ್ನೊಳಗೊಂಡ ದುಂಡುಮೇಜಿನ ಪರಿಷತ್ತೊಂದು ನಡೆಯುವುದಾಗಿ ಪ್ರಕಟನೆ ಹೊರಬಿತ್ತು. ಭಾರತಕ್ಕೆ ಅಧಿರಾಜ್ಯ ಸ್ಥಾನವನ್ನು (ಡೊಮಿನಿಯನ್ ಸ್ಟೇಟಸ್) ನೀಡುವುದಾಗಿ ಪರಿಷತ್ತು ತೀರ್ಮಾನಿಸುವ ಬಗ್ಗೆ ವೈಸ್ರಾಯ್ಯಿಂದ ಭರವಸೆ ಬರಲಿಲ್ಲ. ಸಂಪುರ್ಣ ಸ್ವರಾಜ್ಯವೇ ತನ್ನ ಗುರಿಯೆಂದು ಕಾಂಗ್ರೆಸ್ ಘೋಷಿಸಿತು. ಮತ್ತೊಂದು ಮಹಾ ಚಳವಳಿಗಾಗಿ ಸಿದ್ಧತೆಗಳು ನಡೆದುವು.

1930ರ ಮಾರ್ಚ್ 12ರಂದು ಗಾಂಧಿಯವರು ತಮ್ಮ ಸುಪ್ರಸಿದ್ಧ ಉಪ್ಪಿನ ಸತ್ಯಾಗ್ರಹವನ್ನಾರಂಭಿಸಿದರು. 78 ಮಂದಿ ಅನುಯಾಯಿಗಳೊಂದಿಗೆ ಗಾಂಧಿಯವರು ಅಹಮದಾಬಾದಿನಿಂದ 384 ಕಿಮೀ ದೂರದಲ್ಲಿ ಸಮುದ್ರ ದಂಡೆಯಲ್ಲಿರುವ ದಂಡಿಗೆ ಹೊರಟರು. ಉಪ್ಪಿನ ತಯಾರಿಕೆಯಲ್ಲಿ ಸರ್ಕಾರ ಹೊಂದಿದ್ದ ಏಕಸ್ವಾಮ್ಯವನ್ನು ವಿರೋಧಿಸಿ ಕಾನೂನು ಭಂಗ ಮಾಡುವುದು ಅವರ ಉದ್ದೇಶ. ಏಪ್ರಿಲ್ 6ರಂದು ಅವರು ದಂಡಿಯನ್ನು ತಲಪಿ, ಸಮುದ್ರಸ್ನಾನ ಮಾಡಿ ನೈಸರ್ಗಿಕ ಉಪ್ಪನ್ನು ಕೈಯಲ್ಲಿ ಹಿಡಿದರು. ನಾಡಿನಾದ್ಯಂತ ಜನರು ಗಾಂಧಿಯವರ ಕರೆಯಂತೆ ಸತ್ಯಾಗ್ರಹವನ್ನಾಚರಿ ಸಿದರು. ಸುಮಾರು ಒಂದು ಲಕ್ಷ ಜನ ದಸ್ತಗಿರಿಯಾದರು. ಮೇ 4ರಂದು ಗಾಂಧಿಯವರ ದಸ್ತಗಿರಿಯಾಯಿತು. 1931ರ ಜನವರಿ 26ರ ವರೆಗೂ ಸರ್ಕಾರ ಅವರನ್ನು ಸೆರೆಯಲ್ಲಿಟ್ಟಿತ್ತು. ಸತ್ಯಾಗ್ರಹವನ್ನು ಅಂತ್ಯಗೊಳಿಸುವ ಬಗ್ಗೆ ಮಾರ್ಚ್ 5ರಂದು ಗಾಂಧಿ-ಇರ್ವಿನ್ ಒಪ್ಪಂದಕ್ಕೆ ಸಹಿಯಾಯಿತು. ಸತ್ಯಾಗ್ರಹಿಗಳು ಬಿಡುಗಡೆಯಾದರು. ಕೆಲವೊಂದು ಮಿತಿಗಳೊಳಗೆ, ಸ್ವಂತ ಉಪಯೋಗಕ್ಕಾಗಿ ಉಪ್ಪನ್ನು ತಯಾರಿಸಲು ಅವಕಾಶ ಲಭ್ಯವಾಯಿತು.

1931ರಲ್ಲಿ ಲಂಡನಿನಲ್ಲಿ ನಡೆದ ಎರಡನೆಯ ದುಂಡುಮೇಜಿನ ಪರಿಷತ್ತಿನಲ್ಲಿ ಭಾಗವಹಿಸಲು ಗಾಂಧಿಯವರು ಪ್ರಯಾಣ ಬೆಳೆಸಿದರು. ಅವರ ಭೇಟಿಯಿಂದಾಗಿ ಇಂಗ್ಲೆಂಡ್-ಭಾರತಗಳ ಸಾಮಾನ್ಯ ಜನಗಳ ನಡುವೆ ಹೆಚ್ಚು ನಿಕಟ ಬಾಂಧವ್ಯ ಬೆಳೆಯಿತು. ಆದರೆ ಸಮ್ಮೇಳನದಲ್ಲಿ ಅಲ್ಪಸಂಖ್ಯಾತರಿಗೆ ಸರ್ಕಾರ ವಿಶೇಷ ಪ್ರಾಮುಖ್ಯ ನೀಡಿತು. ಭಾರತೀಯರಿಗೆ ಸ್ವಯಮಾಡಳಿತ ನೀಡುವುದಕ್ಕಿಂತ ಇದಕ್ಕೇ ಆದ್ಯ ಗಮನ ನೀಡುವುದಕ್ಕೆ ಗಾಂಧಿಯವರು ಒಪ್ಪಲಿಲ್ಲ. ಸರ್ಕಾರ ಅನಾವಶ್ಯಕವಾಗಿ ಭಾರತದ ಜನಗಳ ನಡುವೆ ಕೋಮುವಾರು ಭೇದಭಾವವನ್ನು ಬೆಳೆಸುತ್ತಿದೆಯೆಂಬ ವಿಷಯ ಅವರಿಗೆ ಮನವರಿಕೆ ಯಾಯಿತು. ಬ್ರಿಟನ್ ತನ್ನ ಅಧಿಕಾರವನ್ನು ಹಿಂದೆಗೆದು ಕೊಂಡರೆ ಕೋಮುವಾರು ಸಮಸ್ಯೆಗಳೆಲ್ಲ ತಾವಾಗಿಯೇ ಬಗೆಹರಿದಾವೆಂಬುದು ಅವರ ಭಾವನೆ. ಆದರೆ ಅವರ ವಾದ ಫಲಿಸಲಿಲ್ಲ. ಸಮ್ಮೇಳನದಲ್ಲಿ ಅಲ್ಪಸಂಖ್ಯಾತರ ಹಕ್ಕುಗಳನ್ನು ಎತ್ತಿ ಹಿಡಿಯುವವರ ಸಂಖ್ಯೆಯೇ ಹೆಚ್ಚಾಗಿರುವಂತೆ ಸರ್ಕಾರ ತಂತ್ರ ಹೂಡಿತ್ತು.

1931ರ ಕೊನೆಯಲ್ಲಿ ಗಾಂಧಿಯವರು ಹಿಂದಿರುಗಿದಾಗ ಭಾರತದ ರಾಜಕೀಯ ಪರಿಸ್ಥಿತಿ ತೀವ್ರವಾಗಿತ್ತು. ಹಲವು ನಾಯಕರು ಬಂಧಿತರಾಗಿದ್ದರು. ನಿಷೇಧಾಜ್ಞೆಗಳು ಜಾರಿಯಲ್ಲಿದ್ದುವು. ಆಗ ವೈಸ್ರಾಯ್ ಆಗಿದ್ದ ವಿಲಿಂಗ್ಡನನಿಗೆ ಗಾಂಧಿಯವರು ಪತ್ರ ಬರೆದರು. ಪರಿಸ್ಥಿತಿ ಕೈಮೀರದಂತೆ ಯತ್ನಿಸಬೇಕೆಂದೂ ಅನಿವಾರ್ಯವಾದರೆ ಕಾಂಗ್ರೆಸ್ಸು ಸತ್ಯಾಗ್ರಹ ಹೋರಾಟ ವನ್ನು ಮತ್ತೆ ಆರಂಭಿಸಲಾಗುವುದೆಂದೂ ಎಚ್ಚರಿಸಿದರು.
ಆದರೆ ಸರ್ಕಾರ ಲಕ್ಷಿಸಲಿಲ್ಲ. 1932ರ ಜನವರಿ 4ರಂದು ಗಾಂಧಿಯವರು ದಸ್ತಗಿರಿಯಾದರು. ಪಟೇಲರನ್ನೂ ಅವರನ್ನೂ ಸರ್ಕಾರ ಪುಣೆಯ ಎರವಾಡ ಸೆರೆಮನೆ ಯಲ್ಲಿಟ್ಟಿತು. ಹರಿಜನರನ್ನು ಪ್ರತ್ಯೇಕ ಗೊಳಿಸಲು ಸರ್ಕಾರ ಕೈಗೊಳ್ಳಲಿದ್ದ ಕ್ರಮವೊಂದನ್ನು ವಿರೋಧಿಸಿ ಭಾರತ ಕಾರ್ಯದರ್ಶಿಗೆ ಗಾಂಧಿಯವರು ಪತ್ರ ಬರೆದರು. ಗಾಂಧಿಯವರ ಅಭಿಪ್ರಾಯಗಳನ್ನು ಸರ್ಕಾರ ಕಡೆಗಣಿಸಿತು. ಸೆಪ್ಟೆಂಬರ್ 20 ರಂದು ಗಾಂಧಿಯವರು ಉಪವಾಸ ಆರಂಭಿಸಿದರು. ಅನೇಕ ದೇವಸ್ಥಾನ ಗಳು ಹರಿಜನರಿಗೆ ತೆರೆದುವು. ಐದು ದಿನಗಳ ಅನಂತರ ಹಲವು ಒತ್ತಾಯದಂತೆ ಗಾಂಧಿಯವರು ತಮ್ಮ ಉಪವಾಸವನ್ನು ಕೊನೆಗೊಳಿಸಿದರು. 
ಅಸ್ಪೃಶ್ಯರೆನಿಸಿಕೊಂಡ ಹರಿ ಜನರ ಹಿತಸಾಧನೆಗೆ ಗಾಂಧಿ ಯವರು ಪಣತೊಟ್ಟರು. ಅವರಿಗೆ ಹರಿಜನರೆಂಬ ಹೆಸರು ಕೊಟ್ಟವರು ಗಾಂಧಿಯವರೇ. 1933ರಲ್ಲಿ ಅವರು ಹರಿಜನ ಎಂಬ ಹೆಸರಿನ ವಾರಪತ್ರಿಕೆ ಯೊಂದನ್ನು ಸ್ಥಾಪಿಸಿದರು. ಮುಂದೆ ಇದು ಹತ್ತು ಭಾರತೀಯ ಭಾಷೆಗಳಲ್ಲಿ ಪ್ರಕಟವಾಗುತ್ತಿತ್ತು.

ಗಾಂಧಿಯವರು ವರ್ಧಾದಲ್ಲಿ ಸ್ಥಾಪಿಸಿರುವುದು, ಧರ್ಮ, ನೀತಿ ಮುಂತಾದ ನಿಜವಾದ ಆರ್ಷೇಯದ ಮೌಲ್ಯಗಳನ್ನು ನಿರಾಕರಿಸಿರುವುದು, ಬಡತನ ಬಲ್ಲಿದತನ ಬಂಡವಾಳ ಕೂಲಿ ಸರ್ವಸಮಾನತೆ ಇವುಗಳಿಗೆಲ್ಲ ಪಾಶ್ಚಾತ್ಯ ಮಾರ್ಗಗಳ ಹೊರತು ಬೇರೆ ದಾರಿ ಇಲ್ಲವೆಂದು ಅವನ್ನೇ ಅನುಸರಿಸುವುದು-ಇವೇ ಹಿಂದೂ ಸಮಾಜದ ದೌರ್ಬಲ್ಯವಾಗಿದೆ. ಹಿಂದೂ ಧರ್ಮದಲ್ಲಿ ಅನ್ಯಧರ್ಮದಿಂದ ಹಿಂದೂ ಧರ್ಮಕ್ಕೆ ಮತಾಂತರವಿಲ್ಲದುದನ್ನು ಗಾಂಧೀಜಿ ದೊಡ್ಡ ದೋಷವೆಂದು ಎಣಿಸುವುದಿಲ್ಲ. ಯಾವ ಧರ್ಮದ ಯೋಗ್ಯತೆಯೂ ಬರಿಯ ಸಂಖ್ಯಾಬಲವಲ್ಲ. ಮತಾನುಯಾಯಿಗಳೆಲ್ಲ ತಮ್ಮ ಧರ್ಮದ ತಿರುಳನ್ನು ಅರಿತು ಅದರಂತೆ ಆಚರಿಸುವುದು ಆ ಧರ್ಮದ ಶಕ್ತಿ.
ಹಿಂದೂ ಸಮಾಜದ ಜಾತಿಪದ್ಧತಿ, ಅಸ್ಪೃಶ್ಯತೆ, ಮೂಢನಂಬಿಕೆ, ಬಾಲ್ಯವಿವಾಹ, ವಿಧವೆಯರ ಕಷ್ಟಸ್ಥಿತಿ, ಸ್ತ್ರೀಸ್ವಾತಂತ್ರ್ಯ ಇವನ್ನೆಲ್ಲ ತಿದ್ದಲು ಸುಧಾರಣೆ ಆವಶ್ಯಕವೆಂದು ಗಾಂಧೀಜಿ ಅಭಿಮತ. ಸಮಾಜಸುಧಾರಣೆ ರಾಜಕೀಯಕ್ಕಿಂತ ಕಡಿಮೆಯದಲ್ಲ. ಸಮಾಜ ಸುಧಾರಕರು ತೆವಳುತ್ತ ನಡೆಯಬೇಕು. ಶಾಂತರಾಗಿರಬೇಕು. ನಿಸ್ಸ್ವಾರ್ಥತೆಯಿಂದಲೂ ಆತ್ಮತ್ಯಾಗದಿಂದ, ಮನವೊಲಿಸುವ ಮಾರ್ಗದಿಂದಲೂ ಸೇವೆ ಸಲ್ಲಿಸಬೇಕು. ಹಿಂದೂ ಸಮಾಜವನ್ನು ಒಂದೇ ಸಲಕ್ಕೆ ವಿವೇಚನೆಯಿಲ್ಲದೆ ಪಾಶ್ಚಾತ್ಯ ಸಮಾಜವಾಗಿ ಪರಿವರ್ತಿಸಲು ಪ್ರಯತ್ನಿಸುವುದು ವಿವೇಚನಾ ರಹಿತಕಾರ್ಯ. ಯಾವ ರೀತಿಯಲ್ಲಿಯೂ ಹಿಂಸಾಮಾರ್ಗ ವಜರ್್ಯ.
ಆದರ್ಶ ಸಮಾಜದಲ್ಲಿ ಸ್ತ್ರೀಪುರುಷರಲ್ಲಿ ಮೇಲು-ಕೀಳೆಂಬ ಭೇದವಿಲ್ಲ. ಅವರು ವಿವಾಹದಲ್ಲಿ ಗೆಳೆಯರಾಗಿ ಸಮಾನರಾಗಿ ಕೂಡುತ್ತಾರೆ. ಪತಿ ಸ್ವಾಮಿನ್ ಎಂದು ಕರೆಯಲ್ಪಟ್ಟರೆ, ಪತ್ನಿ, ಸ್ವಾಮಿನಿ. ಪತ್ನಿಗೆ ಪತಿ ಗುರು. ಪತಿಗೆ ಪತ್ನಿ ನೆರವೀವ ಸಂಗಾತಿ. ಜೀವನದ ಕಾರ್ಯವನ್ನು ಮತ್ತು ಕರ್ತವ್ಯಗಳನ್ನು ಎಸಗುವುದರಲ್ಲಿ ಒಬ್ಬರು ಮತ್ತೊಬ್ಬರ ಜೊತೆ ಸಹಕರಿಸುವರು. ಒಬ್ಬರ ಅಭಿವೃದ್ಧಿ ಮಾರ್ಗದಲ್ಲಿ ಒಬ್ಬರು ಅಡ್ಡಿಯಾಗರು. ಒಬ್ಬರಲ್ಲೆ (ಹೆಣ್ಣಾಗಲಿ, ಗಂಡಾಗಲಿ) ಭಾವಸಂಪತ್ತಿಯುಳ್ಳವರಾದರೆ, ಆ ಭಾವ ತಮ್ಮ ಸಹಭಾಗಿಗೂ ಉಂಟಾಗುವಂತೆ ಮಾಡುತ್ತಾರೆ. ಒಬ್ಬರಿಗೆ ಒಬ್ಬರು ನಿಜವಾದ ಗುರುಗಳೂ ಮಾರ್ಗದರ್ಶಕರೂ ಆಗುತ್ತಾರೆ. ಇಬ್ಬರಲ್ಲಿ ಯಾರೊಬ್ಬರ ಬುದ್ಧಿ ಭಾವ ಸಂಯಮ ಆದರ್ಶಾನುಕರಣೆ ದೈವಭಕ್ತಿ ಬ್ರಹ್ಮಚರ್ಯಗಳಿಗೆ ಎಂದಿಗೂ ಚ್ಯುತಿಬಾರದು. ಒಂದು ಸುವ್ಯವಸ್ಥಿತ ಸಮಾಜದಲ್ಲಿ, ಕುಟುಂಬಕ್ಕೆ ಜೀವನೋಪಾಯ ಕಲ್ಪಿಸುವ ಹೆಚ್ಚುವರಿ ಹೊರೆ ಸ್ತ್ರೀಯ ಪಾಲಿಗೆ ಬರಬಾರದು. ಮಕ್ಕಳ ಪೋಷಣೆ, ಗೃಹಕೃತ್ಯನಿರ್ವಹಣೆ ಇವೇ ಆಕೆಯ ಸರ್ವಶಕ್ತಿಗಳನ್ನೂ ಪುರ್ಣವಾಗಿ ಆಕರ್ಷಿಸಲು ಸಾಕು. ಆಕೆಗೆ ಇನ್ನೂ ಹೆಚ್ಚು ವ್ಯವಧಾನವೂ ಶಕ್ತಿಯೂ ಇದ್ದಲ್ಲಿ ಅದು ಸಮಾಜಸೇವೆಗೆ ಮೀಸಲಾಗಬೇಕು.
ವಿವಾಹ, ಗಂಡು ಹೆಣ್ಣು ಇಬ್ಬರಿಗೂ ಒಂದು ಪವಿತ್ರ ಸಂಸ್ಕಾರ. ಸತಿಪತಿಯರ ಸಂಯೋಗ, ಬರಿಯ ದೈಹಿಕ ಸಂಯೋಗವಲ್ಲ; ಅದು ಎರಡು ಆತ್ಮಗಳ ನಿಜಸಂಯೋಗ.
ಇಂಥ ಗೃಹಸ್ಥಾಶ್ರಮ ಉಳಿದ ಎಲ್ಲ ಆಶ್ರಮಗಳಿಗಿಂತ ಉತ್ತಮ.
ಗಾಂಧೀ ಸಮಾಜವಾದದಲ್ಲಿ ವಿವಾಹ ಒಂದು ನೈಸರ್ಗಿಕ ಅಂಶ. ಅದನ್ನು ಯಾವ ಅರ್ಥದಲ್ಲಿಯೂ ಕೀಳೆಂದುಭಾವಿಸುವುದು ಶುದ್ಧಾಂಗ ತಪ್ಪು. ವಿವಾಹವನ್ನು ಒಂದು ಪವಿತ್ರ ಸಂಸ್ಕಾರವೆಂದು ಭಾವಿಸಿ, ಅದರ ಅನಂತರವೂ ಆತ್ಮಸಂಯಮದ ಜೀವನವನ್ನು ನಡೆಸುವುದು ಆದರ್ಶ. ಹಿಂದೂ ಧರ್ಮದ ನಾಲ್ಕು ಆಶ್ರಮಗಳಿಗೂ ಅದೇ ಆಧಾರ. ಆದರೆ ದುರದೃಷ್ಟವಶಾತ್ ಆಧುನಿಕ ಕಾಲದಲ್ಲಿ ವಿವಾಹ ಒಂದು ದೈವಿಕ ಸಂಯೋಗವೆಂದು ಪರಿಗಣಿಸಲ್ಪಟ್ಟಿದೆ. ವಿವಾಹದ ಕಟ್ಟು ಸಡಿಲವಾದಾಗ ಸಂಯಮದ ಆಚರಣೆಯಿಲ್ಲದ ಸ್ತ್ರೀ, ವೈಮನಸ್ಯದ ಮೂಲವಾದಾಳು. ನಿಗ್ರಹವಿಲ್ಲದೆ ಹೋದಾಗ ಮಾನವರು ಪಶುಗಳಂತೆ.

ವಿವಾಹ ಮತ್ತು ಕಾಮತೃಪ್ತಿಗಳ ವಿಷಯದಲ್ಲಿ ಗಾಂಧೀಜಿ ಸ್ಪಷ್ಟ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ವಿವಾಹದ ಗುರಿ ಸಂತಾನಾಪೇಕ್ಷೆಗಾಗಿ ಮಾತ್ರ. ಸಂತಾನಾಪೇಕ್ಷೆ ಯಿಲ್ಲದಿದ್ದರೆ ವಿವಾಹ ಖಂಡಿತ ಕೂಡದು. ಸಂತಾನ ಹೊಂದಬೇಕೆಂಬ ಆಸೆ ಸ್ವಾಭಾವಿಕ ವಾದುದು. ಅದು ತೃಪ್ತಿಯಾದ ಕೂಡಲೇ ಸಂಭೋಗವೇ ಕೂಡದು. ಕಾಮತೃಪ್ತಿಯ ವಿಷಯದಲ್ಲಿ ಸ್ತ್ರೀ ಪುರುಷರು ಒಬ್ಬರನ್ನೊಬ್ಬರು ಬಲಾತ್ಕರಿಸಬಾರದು. ಸಂತಾನಾಪೇಕ್ಷೆ ಮುಗಿದ ಕೂಡಲೇ ಕಾಮರಹಿತ ವಿವಾಹಜೀವನವನ್ನು ನಡೆಸಬೇಕು. ಕಾಮವನ್ನು ತೃಪ್ತಿಮಾಡಿಕೊಳ್ಳದೆ ಇದ್ದರೆ ದೇಹಾರೋಗ್ಯ ಕೆಡುತ್ತದೆ ಎಂಬ ಭಾವನೆ ಶುದ್ಧತಪ್ಪು. ವೀರ್ಯನಾಶದಿಂದ ಯಾರಿಗೂ ಯಾವ ಕಾಲದಲ್ಲಿಯೂ ಒಳ್ಳೆಯದಾಗಿಲ್ಲ. ದಂಪತಿಗಳಲ್ಲಿ ಯಾರೊಬ್ಬರೂ ಸಂಯಮದ ಎಲ್ಲ ಕಟ್ಟುಪಾಡುಗಳನ್ನು ಮುರಿಯುವುದಾದರೆ, ವಿವಾಹಿತ ಜೀವನ ಅಸಹ್ಯವೆನಿಸುತ್ತದೆ. ದಂಪತಿಗಳು ಒಮ್ಮತದಿಂದ, ಸಂಯೋಗ ಅಪೇಕ್ಷಣೀಯವೆಂದು ಭಾವಿಸುವುದಾದರೆ ಇತರರೆಲ್ಲರನ್ನೂ ಬಿಟ್ಟು ಅವರಿಬ್ಬರೇ ಸಂಯೋಗ ಹೊಂದುವ ಅಧಿಕಾರವನ್ನು ವಿವಾಹ ಸ್ಥಿರಪಡಿಸುತ್ತದೆಯೇ ಹೊರತು, ಇಬ್ಬರಲ್ಲಿ ಯಾರೊಬ್ಬರೂ ಮತ್ತೊಬ್ಬರ ಇಚ್ಛೆಯಂತೆ ಸಂಯೋಗಕ್ಕೆ ತಲೆಬಾಗುವಂತೆ ಬಲಾತ್ಕರಿಸುವ ಅಧಿಕಾರವನ್ನು ನೀಡುವುದಿಲ್ಲ. ಇಬ್ಬರಲ್ಲಿ ಯಾರೊಬ್ಬರಾಗಲಿ, ನೈತಿಕ ಅಥವಾ ಇತರ ಯಾವ ಕಾರಣಕ್ಕೇ ಆಗಲಿ, ಮತ್ತೊಬ್ಬರ ಇಚ್ಛೆಯಂತೆ ನಡೆಯದಿದ್ದರೆ, ವಿಚ್ಛೇದನವೇ ಆಯ್ದುಕೊಳ್ಳಬೇಕಾದ ಅವಕಾಶವೆನಿಸಿದಲ್ಲಿ, ಅದನ್ನು ಒಪ್ಪಿಕೊಳ್ಳಲು ಹಿಂದೆಗೆಯಬಾರದು. ಆದರೆ ಅದು ನೈತಿಕ ಅಥವಾ ಸಂಯಮದ ಕಾರಣಗಳಿಗಾಗಿ ಆಗಬೇಕೇ ಹೊರತು ಅನ್ಯಸುಖಲೋಲುಪತೆಗಾಗಿ ಆಗಕೂಡದು. ಪತ್ನಿ ತನ್ನ ಸ್ವತಂತ್ರವಾದ ಮಾರ್ಗವನ್ನು ಆರಿಸಿಕೊಂಡು, ತಾನು ಸರಿ ಎಂದು ಭಾವಿಸಿರುವ ಘನವಾದ ಉದ್ದೇಶಕ್ಕಾಗಿ ನಮ್ರಪುರ್ವಕ ಧೈರ್ಯದಿಂದ ಪರಿಣಾಮಗಳನ್ನು ಎದುರಿಸಬೇಕು.

ವಿವಾಹ ಬಾಳಿನಲ್ಲಿ ಸ್ವಾಭಾವಿಕ ಅಂಶ, ಭೋಗಾಪೇಕ್ಷೆಯಿಂದ ಚೆನ್ನಾಗಿಯೂ ನಿಜವಾಗಿಯೂ ನಡೆಸುವ ವೈವಾಹಿಕ ಜೀವನ ಅನೇಕ ವಿಧಗಳಲ್ಲಿ ಅವಿವಾಹಿತ ಜೀವನಕ್ಕಿಂತ ಹೆಚ್ಚು ಕಷ್ಟವಾದುದು. ಸಮಾಜಸೇವೆಯನ್ನು ಅಜೀವ ಪರ್ಯಂತ ಮಾಡುವ ದೃಷ್ಟಿಯಿಂದ ಕೆಲವು ಮಹಿಳೆಯರು ಅವಿವಾಹಿತರಾಗಿಯೇ ಉಳಿಯಲು ಬಂiÀÄಸಬಹುದು. ಅಂಥವರೂ ವಿವಾಹಿತರಾಗಿ ಪತಿಪತ್ನಿಯರಿಬ್ಬರೂ ಪರಸ್ಪರ ಸಹಾಯಕರಾಗಿ ಸಮಾಜಸೇವೆಯನ್ನು ನಡೆಸುವುದು ಉತ್ತಮ. ವಿವಾಹಿತರಾಗಿ ಕುಟುಂಬ ಸೇವೆ ನಡೆಸುವುದು ನಿರರ್ಥಕವಲ್ಲ. ರಾಷ್ಟ್ರಸೇವೆ ಎಂದರೆ ಮಾನವಸೇವೆ. ಹಾಗೆಯೇ ನಿಸ್ಸ್ವಾರ್ಥ ಕುಟುಂಬ ಸೇವೆಯೂ ರಾಷ್ಟ್ರಸೇವೆ ಎನಿಸೀತು. ಧರ್ಮ ಅರ್ಥ ಕಾಮಗಳಲ್ಲಿ, ಪತಿಪತ್ನಿಯರಲ್ಲಿ ಸಹಮತವಿರಬೇಕೆಂಬುದು ಹಿಂದೂ ವಿವಾಹದ ಆರ್ಷೇಯ ಕಟ್ಟಳೆ. ಆತ್ಮಸಾಕ್ಷಿಗೆ ವಿರೋಧವಾದ ಕಟ್ಟಳೆಯನ್ನು ಗಂಡನಾಗಲೀ ಹೆಂಡತಿಯಾಗಲೀ ನಡೆಸಬೇಕಾದುದಿಲ್ಲ. ಗಂಡಹೆಂಡಿರು ಪರಸ್ಪರ ಪ್ರೇಮವುಳ್ಳವರಾಗಿ ವಶವರ್ತಿಗಳಾಗಿರ ಬೇಕು. ಹಿಂದೂ ಧರ್ಮ ಪುರುಷ-ಸ್ತ್ರೀ ಇಬ್ಬರಿಗೂ ಅವರು ಅಪೇಕ್ಷಿಸುವ ರೀತಿಯಲ್ಲಿ ಅವರ ಹುಟ್ಟಿನ ಏಕಮಾತ್ರ ಗುರಿಯಾದ ಆತ್ಮಸಾಕ್ಷಾತ್ಕಾರವನ್ನು ಹೊಂದಲು ಪುರ್ಣ ವ್ಯಕ್ತಿಸ್ವಾತಂತ್ರ್ಯವನ್ನು ನೀಡುತ್ತದೆ. ಸ್ತ್ರೀಪುರುಷರಿಗೆ, ಹಿಂದೂ ವಿಧವೆಯರು ಇಂದ್ರಿಯ ನಿಗ್ರಹಮಾಡಿ ಕುಟುಂಬದ ಮತ್ತು ಸಮಾಜದ ಸೇವೆ ಸಲ್ಲಿಸುತ್ತಿರುವುದು ಉನ್ನತ ಧ್ಯೇಯದಿಂದಲೆ. ಆದರೆ ಬಾಲವಿಧವೆಯರು ಪುನರ್ವಿವಾಹವಾಗಬಹುದು. ಯಾರೇ ಆಗಲಿ, ಸಂಯಮ ಸಾಧ್ಯವಿಲ್ಲದಿದ್ದರೆ ಪುನರ್ವಿವಾಹಿತರಾಗಿ ಗೃಹಸ್ಥಾಶ್ರಮ ನಡೆಸಬೇಕೇ ಹೊರತು ಸ್ವೇಚ್ಛಾಚಾರಿಗಳಾಗಬಾರದು.
ಗಾಂಧೀಜಿಯ ದೃಷ್ಟಿಯಲ್ಲಿ ಬ್ರಹ್ಮಚರ್ಯವೆಂಬುದು ಮನುಷ್ಯನಿಗೆ ದೊರಕಿರುವ ಅತ್ಯಮೂಲ್ಯ ವಸ್ತು: ಭಾರತೀಯ ಸಮಾಜವಿಜ್ಞಾನ ಜಗತ್ತಿಗೆ ಕೊಟ್ಟಿರುವ ಶುಕ್ರಸಮ ಪ್ರಕಾಶಮಾನವಾದ ತೇಜೋನಿಧಿ. ಮೇಲುನೋಟಕ್ಕೆ ಬರಿಯ ಜನನೇಂದ್ರಿಯ ನಿಯಂತ್ರಣವಷ್ಟೇ ಬ್ರಹ್ಮಚರ್ಯವೆಂದು ತೋರಿದರೂ ಅದಕ್ಕೆ ಎಲ್ಲ ಬಗೆಯ ನಿಗ್ರಹಗಳೂ ಅಗತ್ಯವಾಗುತ್ತವೆ. ಧ್ಯೇಯಸಾಧನೆಯ ಉತ್ಕಟೇಚ್ಛೆಯ ಜೊತೆಯಲ್ಲಿಯೇ ಅನುಷ್ಠಾನವೂ ಅಗತ್ಯ. ಬ್ರಹ್ಮಚಾರಿ ಮನೋ ವಾಕ್ ಕಾಯಗಳನ್ನು ನಿಯಂತ್ರಿಸಬೇಕು. ಆಲೋಚನೆಯ ಮೇಲೆ ನಿಯಂತ್ರಣವಿಲ್ಲದಿದ್ದರೆ ಉಳಿದೆರಡರ ನಿಯಂತ್ರಣ ವ್ಯರ್ಥ. ಬ್ರಹ್ಮಚಾರಿ ನಿರೋಗಿಯೂ ದೀರ್ಘಾಯುವೂ ಆಗಿರುವನು. ಅವನಿಗೆ ಮುಪ್ಪು ಬುದ್ಧಿಮಾಂದ್ಯವೂ ಇಲ್ಲ. ಗೀತೆಯಲ್ಲಿ ಬಣ್ಣಿಸಿದ ಸ್ಥಿತಪ್ರಜ್ಞನ ಲಕ್ಷಣಗಳನ್ನೆಲ್ಲ ಅವನು ತೋರುವನು.
ಬ್ರಹ್ಮಚರ್ಯಕ್ಕೆ ಸಾಧನ ಯಾವುದು? ಸತ್ಯದಲ್ಲಿ ಪರಮಾತ್ಮನಲ್ಲಿ ಅವಲಂಬನೆ. ವಿವರವಾಗಿ ಹೇಳುವುದಾದರೆ ಅಹಿಂಸೆ, ಸತ್ಯ, ಅಸ್ತೇಯ (ಇತರರದನ್ನು ಅಪಹರಿಸದಿರುವುದು), ಬ್ರಹ್ಮಚರ್ಯ, ಅಪರಿಗ್ರಹ, ಕಾಯಕ, ಜಿಹ್ವಾ ನಿಗ್ರಹ, ಅಭಯ, ಸರ್ವಧರ್ಮಸಮನ್ವಯ, ಸ್ವದೇಶಿ ಮತ್ತು ಅಸ್ಪೃಶ್ಯತಾ ನಿವಾರಣೆ ಈ ಎಲ್ಲ ನಿಯಮಗಳನ್ನೂ ತಪ್ಪದೆ ಆಚರಿಸುವವನು ಮಾತ್ರ ಬ್ರಹ್ಮಚಾರಿ.
ಬ್ರಹ್ಮಚರ್ಯದ ಗುರಿ ಯಾವುದು? ಪರಮಾತ್ಮಸಾನ್ನಿಧ್ಯ ಅಥವಾ ಬ್ರಹ್ಮಸಾಮೀಪ್ಯ. ಬ್ರಹ್ಮಚರ್ಯ ಪಾಲನೆಗೆ ನೇರವಾದ ದಾರಿ ಪರಮಾತ್ಮಸ್ಮರಣೆ, ರಾಮನಾಮ.
ಇಂಥ ಆದರ್ಶ ಬ್ರಹ್ಮಚರ್ಯ, ಸ್ಥಿತಪ್ರಜ್ಞರಿಗೆ ಮಾತ್ರ ಸಾಧ್ಯವೆಂದು ಉಳಿದವರು ಇಂದ್ರಿಯಗಳ ಸ್ವೇಚ್ಛಾವರ್ತನೆಗೆ ಬಲಿಯಾಗಬಾರದು. ಸಂಯಮ ಎಲ್ಲರಿಗೂ ಆವಶ್ಯಕ. ಗೃಹಸ್ಥರಾದ ಸ್ತ್ರೀಪುರುಷರು ಸಹ ಸಂತಾನಾಪೇಕ್ಷೆ ತೀರಿದ ಅನಂತರ ಬ್ರಹ್ಮಚರ್ಯವನ್ನು ಅನುಸರಿಸುವುದರಿಂದ ಅವರ ಬಾಳಿನಲ್ಲಿ ಹೆಚ್ಚು ಕಾಂತಿಯೂ ಸುಖವೂ ದೇಹದಲ್ಲಿ ಬಲವೃದ್ಧಿಯೂ ಉಂಟಾಗುವುದಲ್ಲದೆ, ದಂಪತಿಗಳಾದುದೇ ಇಂದ್ರಿಯ ಲಂಪಟತನಕ್ಕಾಗಿ ಎಂಬ ತಪ್ಪು ಭಾವ ಮರೆಯಾಗಿ ಪರಸ್ಪರರಲ್ಲಿರುವ ಗುಣೌನ್ನತ್ಯವನ್ನರಿತು ಸೇವಾಕಾರ್ಯದಲ್ಲಿ ಒಬ್ಬರಿಗೊಬ್ಬರು ಮಿತ್ರರಾಗಿ ಪರಸ್ಪರ ಆತ್ಮೋದ್ಧಾರಕ್ಕೆ ತೊಡಗಲು ಸಹಾಯಕವಾಗುವುದು. ಸ್ವತಃಗಾಂಧೀಜಿಯೇ ತಮ್ಮ ಮೂವತ್ತೈದನೆಯ ವಂiÀÄಸ್ಸಿನಿಂದಲೇ ಕಸ್ತೂರ ಬಾ ಅವರೊಂದಿಗೆ ದೈಹಿಕ ಸಂಪರ್ಕವನ್ನು ತೊರೆದರಾದರೂ ಶ್ರೀರಾಮ ಸೀತೆಯರಂತೆ ಆದರ್ಶ ದಂಪತಿಗಳಾಗಿದ್ದರು.
ಸಂತತಿನಿಯಂತ್ರಣದ ವಿಷಯದಲ್ಲಿ ಗಾಂಧೀಜಿ ಸ್ಪಷ್ಟವಾದ ಮತ್ತು ಖಚಿತವಾದ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ಜನನವನ್ನು ನಿಯಂತ್ರಿಸಬೇಕೆಂಬುದರಲ್ಲಿ ಯಾರಿಗೂ ಭಿನ್ನಾಭಿಪ್ರಾಯವಿಲ್ಲ. ಪ್ರಾಚೀನಕಾಲದಿಂದಲೂ ಇದಕ್ಕಾಗಿ ಅನುಸರಿಸಿದ ಮಾರ್ಗ ಬ್ರಹ್ಮಚರ್ಯ ಅಥವಾ ಸಂಯಮ. ಸಂತತಿ ನಿಯಂತ್ರಕರು (ಸರ್ಕಾರವೇ ಆಗಲಿ, ಅದರ ಪ್ರಚಾರಕರೇ ಆಗಲಿ) ಕೃತಕ ಉಪಾಯಗಳನ್ನು ಹುಡುಕುವ ಬದಲು ಆತ್ಮನಿಗ್ರಹದ ಸಾಧನಗಳನ್ನು ಶೋಧಿಸಿದರೆ ಮಾನವ ಕುಲವೇ ಅವರಿಗೆ ಋಣಿಯಾಗಿರುವುದು. ಸ್ತ್ರೀಪುರುಷ ಸಂಯೋಗ ಬರಿ ಭೋಗಕ್ಕಾಗಿರದೆ ಸಂತತಿ ಜನನಕ್ಕಾಗಿದೆ. ಸಂತತಿಜನನದ ಇಚ್ಛೆಯಿಲ್ಲದೆ ಮಾಡಿದ ಸ್ತ್ರೀಸಂಭೋಗ ಮಹಾಪರಾಧ. ಕೃತಕ ಉಪಾಯಗಳಿಂದ ದುರಾಚಾರಕ್ಕೆ ಉತ್ತೇಜನ ದೊರೆಯುತ್ತದೆ. ಅಲ್ಲದೆ ಅಂಥ ಉಪಾಯಗಳ ಅಂಗೀಕಾರದಿಂದ ನಪುಂಸಕತ್ವವೂ ಸ್ನಾಯು ದೌರ್ಬಲ್ಯವೂ ಹುಚ್ಚೂ ಉಂಟಾಗುತ್ತದೆ. ಕೃತಕ ಉಪಾಯಗಳನ್ನು ಪುರಸ್ಕರಿಸುವ ಜನರು, ತಮ್ಮ ಅಪಾಯಕರಚಟುವಟಿಕೆಯನ್ನು ತಡೆಹಿಡಿದು, ವಿವಾಹಿತರಿಗೂ ಅವಿವಾಹಿತರಿಗೂ ಬ್ರಹ್ಮಚರ್ಯೆಯಿಂದಾಗುವ ಹಿತವನ್ನು ಬಿಂಬಿಸಬೇಕು. ಸಂತತಿ ನಿಯಮನಕ್ಕೆ ಇದೊಂದೇ ನೇರವಾದ ಹಾಗೂ ಉದಾತ್ತವಾದ ಉಪಾಯ.

ಪ್ರಕೃತಿಯ ನಿಯಮ ಕಠೋರ. ತಾನು ಎಸಗಿದ ಕರ್ಮಗಳ ಫಲವನ್ನು ತಪ್ಪಿಸಿ ಕೊಳ್ಳಲೆತ್ನಿಸುವುದು ತಪ್ಪು ಹಾಗೂ ಅನೀತಿ. ಯಾವ ಸಮಾಜ, ಆಗಲೇ ಅನೇಕ ಕಾರಣಗಳಿಂದ ಸತ್ತ್ವಹೀನವಾಗಿದೆಯೋ ಅದು ಕೃತಕ ಸಾಧನಗಳಿಂದ ಇನ್ನೂ ಸತ್ತ್ವಹೀನವಾಗುತ್ತದೆ. ಕೃತಕ ಸಾಧನಗಳಿಂದ ಸ್ತ್ರೀಯನ್ನು ಪುರುಷ ಮತ್ತಷ್ಟು ತನ್ನ ಭೋಗಪಾಲನೆಯ ಸಾಮಗ್ರಿಮಾಡಿಕೊಂಡು ಅಧೋಗತಿಗಿಳಿಸುತ್ತಾನೆ. ಪುರುಷ ನಿಜವಾಗಿಯೂ ಸ್ತ್ರೀಗೆ ಒಳ್ಳೆಯದನ್ನು ಮಾಡಲು ಬಯಸುವುದಾದರೆ ಅವನು ತನ್ನ ಮೇಲೆ ನಿಗ್ರಹವನ್ನು ಹಾಕಿಕೊಳ್ಳಲಿ. ಅತಿಸಂತಾನ ಪಾಪಕರ. ಆದರೆ ತಮ್ಮ ಕರ್ಮದ ಪರಿಣಾಮವನ್ನು ತಪ್ಪಿಸಿಕೊಳ್ಳಲೆತ್ನಿಸುವುದು ಇನ್ನೂ ಹೆಚ್ಚು ಪಾಪಕರ. ಇದರಿಂದ ಮಾನವನ ಮಾನವತ್ವವೇ ಹೋಗುತ್ತದೆ.
ಜನನನಿಯಂತ್ರಣ ಪ್ರತಿಪಾದಕರು ಕೃತಕಸಾಧನಗಳ ಮೂಲಕ ಮಾನವನ ಸರ್ವಕಾಲವೂ ಇಂದ್ರಿಯಲಂಪಟನಾಗಲು ಸೌಕರ್ಯವನ್ನು ಒದಗಿಸುತ್ತಿದ್ದಾರೇ ಹೊರತು ಒಂದು ಸಲವಾದರೂ ಸಂಯಮದ ಆದರ್ಶವನ್ನು ಜನರ ಮುಂದೆ ಇಡುವುದು ಆವಶ್ಯಕವೆಂಬುದನ್ನು ಪರಿಗಣಿಸಿಲ್ಲ. ಕೃತಕೋಪಾಯಗಳಿಗೆ ಅನೇಕ ಕೋಟಿ ರೂಪಾಯಿಗಳನ್ನು ವೆಚ್ಚಮಾಡುವಂತೆ ಸಂಯಮ ಸಂತಾನ ನಿಯಂತ್ರಣಕ್ಕೂ ಸ್ತ್ರೀ ಪುರುಷರು ಯಾವಾಗಲೂ ಭೋಗಲಾಲಸರೂ ಕಾಮುಕರೂ ಆದ ಪಶುಗಳಾಗಿರ ಬೇಕೆಂದು ನಿರ್ಣಯಿಸುವುದು ಸಮಂಜಸವಾಗಲಾರದು. ನಮ್ಮ ವಿಜ್ಞಾನ ಇಷ್ಟೊಂದು ಬೆಳೆದಿದ್ದರೂ ಮನುಷ್ಯದೇಹದ ರಹಸ್ಯದ ವಿಷಯ ನಮಗೆ ತಿಳಿದಿರುವುದು ಬಲು ಕಡಿಮೆ. ಅದರ ಮೇಲೆ ಈ ಬಗೆಯ ಕೃತಕ ಆಘಾತಗಳಿಂದ, ಮುಂದಲ ಜನಾಂಗದ ಮೇಲೆ ಏನು ಪರಿಣಾಮವಾಗುವುದೋ ಎಂಬ ಶಂಕೆ ಅನಿವಾರ್ಯ.
ಇವು ಸಮಾಜದ ಬಗ್ಗೆ ಗಾಂಧೀಜಿ ತಾಳಿದ್ದ ಕೆಲವು ಮೂಲಭೂತ ಅಭಿಪ್ರಾಯಗಳು.

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ